‘ಏಳುಮಲೆ’ ಮಡಿಲಲ್ಲಿ ಪ್ರಿಯಾಂಕಾ: ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಮಿಂಚಲು ಬರುತ್ತಿದ್ದಾರೆ ‘ಮಹಾನಟಿ’

priyanka 1
Published on

ಬೆಂಗಳೂರು: ತರುಣ್ ಸುಧೀರ್ ನಿರ್ದೇಶಿಸಿದ್ದ ‘ರಾಬರ್ಟ್’ ಹಾಗೂ ‘ಕಾಟೇರ’ದಲ್ಲಿ ಹೊಸ ನಾಯಕಿಯರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ್ದರು. ರಾಬರ್ಟ್’ ಮೂಲಕ ಆಶಾ ಭಟ್, ‘ಕಾಟೇರ’ದಿಂದ ಅರಾಧನಾ ರಾಮ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದೀಗ ತರುಣ್ ನಿರ್ಮಿಸಿರುವ ‘ಏಳುಮಲೆ’ ಚಿತ್ರದಲ್ಲೂ ಇದೇ ನಿಯಮ ಮುಂದುವರಿಸಿದ್ದು, ‘ಮಹಾನಟಿ’ ವಿನ್ನರ್ ಪ್ರಿಯಾಂಕಾರನ್ನು ಚಂದನವನಕ್ಕೆ ಪರಿಚಯಿಸುತ್ತಿದ್ದಾರೆ. ಕರ್ನಾಟಕ- ತಮಿಳುನಾಡು ಗಡಿಭಾಗದ ಕಥೆಯಲ್ಲಿ ‘ಏಕ್‌ಲವ್‌ಯಾ’ ಖ್ಯಾತಿಯ ರಾಣಾ ನಾಯಕನಾಗಿದ್ದಾರೆ. ಅವರಿಗೆ ಪ್ರಿಯಾಂಕಾ ಆಚಾರ್ ಜೋಡಿಯಾಗಿದ್ದಾರೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಶುಕ್ರವಾರ ರಿಲೀಸ್ ಆಗುತ್ತಿದೆ. ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವ ಖುಷಿಯಲ್ಲಿರುವ ಪ್ರಿಯಾಂಕಾ, ‘‘ಏಳುಮಲೆ’ 2004ರಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ. ಆದರೆ, ನಾನು ಹುಟ್ಟಿದ್ದು 2006ರಲ್ಲಿ. 2004ರಲ್ಲಿ ನಡೆದ ಸಂಗತಿಗಳು ಹಾಗೂ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಪರಿಚಯವಿಲ್ಲ. ಆ ವಿಯಷವನ್ನು ಮೊದಲು ತಿಳಿಯಬೇಕಾಯಿತು. ಅಂದಿನ ಕಾಲಕ್ಕೆ ಹೇಗೆ ಇರಬೇಕು ಹಾಗೆಯೇ ಇರಲು ಮೊದಲು ತಯಾರಿ ನಡೆಸಿದೆ. ತುಂಬಾ ಸವಾಲಿನ ಪಾತ್ರ. ತಮಿಳು ಭಾಷೆ ಬೇರೆ ಕಲಿಯಬೇಕಿತ್ತು. ಅದಕ್ಕಾಗಿ ನಾವು 20 ದಿನಗಳ ಕಾಲ ವರ್ಕ್‌ಶಾಪ್ ಮಾಡಿದೆವು. ಇಲ್ಲಿ ಭಾಷೆ ಕಲಿಕೆ, ಅಭಿನಯ, ಎಮೋಷನ್ ಕ್ಯಾರಿ ಮಾಡುವುದು ಹೇಗೆ ಎಂಬ ಎಲ್ಲ ಅಂಶಗಳನ್ನು ಕಲಿತೆ. ಇನ್ನು ನಾಗಾಭರಣ ಸರ್, ತರುಣ್ ಸರ್ ಜತೆ ಕೆಲಸ ಮಾಡುತ್ತೇವೆ ಎಂದರೆ ನಮಗೆ ತುಂಬಾ ಕಲಿಯುವುದು ಇರುತ್ತದೆ. ಅಂತಹ ಕಲಿಕೆ ಇಡೀ ತಂಡದಿಂದ ದೊರೆತಿದೆ’ ಎನ್ನುತ್ತಾರೆ ಪ್ರಿಯಾಂಕಾ.

ಕನಸು ನನಸಾದಾಗ

‘ಏಳುಮಲೆ’ ತಂಡ ಸೇರಿರುವುದೇ ಅಚ್ಚರಿ ಎನ್ನುವ ಪ್ರಿಯಾಂಕಾ, ‘‘ಮಹಾನಟಿ’ ಮುಗಿದ ಬಳಿಕ ಎಂದಿನಂತೆ ನಾನು ಕಾಲೇಜಿಗೆ ಹೊರಟೆ. ಆಗ ತುಂಬಾ ಜನ, ಮುಂದೆ ಏನು ಎಂದು ಕೇಳುತ್ತಿದ್ದರು. ನಾನಾಗ ತರುಣ್ ಸರ್ ಸಿನಿಮಾದ ಕೆಲಸಗಳು ನಡೆಯುತ್ತಿವೆ ಎಂದು ಸುಮ್ಮನೇ ಹೇಳುತ್ತಿದ್ದೆ. ಆದರೆ, ಸ್ವಲ್ಪ ದಿನಗಳಲ್ಲಿಯೇ ಅದು ನಿಜವಾಗಿಬಿಟ್ಟಿತ್ತು. ಅದೇ ನನಗೆ ಅಚ್ಚರಿ. ಡಿ.15ರಂದು ತರುಣ್ ಸರ್ ಕರೆ ಮಾಡಿ, ಒಂದು ಸಿನಿಮಾ ಇದೆ ಮಾಡುತ್ತೀರಾ ಎಂದು ಕೇಳಿದರು. ನಾನು ತಕ್ಷಣ ಒಪ್ಪಿಕೊಂಡೆ. ಅವತ್ತು ನನ್ನ ಕನಸು ನನಸಾದ ದಿನ. ‘ಮಹಾನಟಿ’ ಬಳಿಕ ತುಂಬಾ ಕಥೆಗಳು ಬಂದಿದ್ದವು. ಆದರೆ, ನಾನೇ ಒಪ್ಪಿರಲಿಲ್ಲ. ಗಟ್ಟಿ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದೆ. ಅದು ‘ಏಳುಮಲೆ’ ಮೂಲಕ ಸಾಕಾರವಾಗಿದೆ. ಸದ್ಯ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೇನೆ’ ಎನ್ನುತ್ತಾರೆ. ಅಂದಹಾಗೆ, ಕನ್ನಡಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಪ್ರಿಯಾಂಕಾ ಆಚಾರ್ ಪರಭಾಷೆಗಳಿಗೆ ಹಾರುವ ನಿರೀಕ್ಷೆ ಇದೆ. ಖುದ್ದು ತರುಣ್ ಕಿಶೋರ್ ಕೆಲ ತಮಿಳು ಮತ್ತು ತೆಲುಗು ತಂಡಗಳಿಗೆ ಪ್ರಿಯಾಂಕಾರನ್ನು ಪರಿಚಯಿಸಿದ್ದಾರಂತೆ. ಆದರೆ, ಆ ಸಿನಿಮಾಗಳ ಬಗ್ಗೆ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net