

ಹುಬ್ಬಳ್ಳಿ: ರಾ. ಸೂರ್ಯ ನಟಿಸಿ, ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಸಿನಿಮಾ ‘ಎಲ್ಟು ಮುತ್ತ’. ಶೌರ್ಯ ಪ್ರತಾಪ್, ಪ್ರಿಯಾಂಕಾ ಮಳಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು. ಉಪ್ಪಿನ ಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಭೂಮರಡಿ, ಪಾಡುರಂಗ ಎಚ್. ನೀರಳಕೇರಿ ಆಡಿಯೋ ಲಾಂಚ್ ಮಾಡಿ, ತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಸಂಗೀತ ಕ್ಷೇತ್ರದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರನ್ನು ಸನ್ಮಾನಿಸಲಾಯಿತು. ರಾ. ಸೂರ್ಯ, ‘ನಾನು ಮೂಲತಃ ಕೊಡಗಿನವನು. ಅಲ್ಲಿನ ಒಂದು ಜನಾಂಗದ ಕಥೆಯನ್ನು ಇಡೀ ರಾಜ್ಯಕ್ಕೆ ಹೇಳುವ ಪ್ರಯತ್ನ ಈ ಸಿನಿಮಾ. ನಾನು ಆ ಜನರನ್ನು ನೋಡಿದ್ದೇನೆ. ಕೆಲವರು ಬದುಕಿದ್ದಾರೆ. ಇನ್ನು ಕೆಲವರು ಈಗಿಲ್ಲ. ಸುಮಾರು 55 ದಿನಗಳ ಕಾಲ ಕೊಡಗಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಕನಕಪುರದ ಬಳಿ ಒಂದು ಹಾಡು ಚಿತ್ರೀಕರಿಸಿದ್ದೇವೆ. ಇದೇ ತಿಂಗಳ 16ಕ್ಕೆ ಟ್ರೇಲರ್ ಬಿಡುಗಡೆ ಮಾಡಲಿದ್ದು, ಆಗಸ್ಟ್‌ನಲ್ಲಿ ಸಿನಿಮಾ ತೆರೆ ಮೇಲೆ ಬರಲಿದೆ’ ಎಂದು ಮಾಹಿತಿ ನೀಡಿದರು. ಕಾಕ್ರೋಚ್ ಸುಧಿ, ಬಾಲನಟಿ ಪ್ರಿಯಾ, ನವೀನ್ ಪಡೀಲ್ ತಾರಾಗಣದಲ್ಲಿದ್ದಾರೆ. ಪ್ರಸನ್ನ ಕೇಶವ ಸಂಗೀತ ಚಿತ್ರಕ್ಕಿರಲಿದೆ.
ಸವಾಲಿನ ಪಾತ್ರದಲ್ಲಿ ಶೌರ್ಯ, ಪ್ರಿಯಾಂಕಾ:
‘ಎಲ್ಟು ಮುತ್ತ’ ಬಗ್ಗೆ ನಾಯಕ ನಟ ಶೌರ್ಯ ಪ್ರತಾಪ್, ‘ನಾನು ಬರವಣಿಗೆ ಹಂತದಿಂದಲೇ ಈ ಚಿತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಮೊದಲು ರಂಗಭೂಮಿಯಲ್ಲೂ ಕೆಲಸ ಮಾಡಿದ್ದೆ. ಇದು ನನ್ನ ಮೊದಲ ಸಿನಿಮಾ. ‘ಎಲ್ಟು’ ಪಾತ್ರಕ್ಕಾಗಿ ನಾನು ದೈಹಿಕ ತಯಾರಿಗಿಂತ ಮಾನಸಿಕವಾಗಿ ಸಾಕಷ್ಟು ಸಿದ್ಧತೆ ನಡೆಸಿದೆ’ ಎಂದರು. ನಾಯಕಿ ಪ್ರಿಯಾಂಕಾ, ‘ಕೊಡಗಿನಲ್ಲಿ ಇಂತಹದ್ದೊಂದು ಜನಾಂಗ ಇದೆ ಎಂದು ನನಗೆ ಗೊತ್ತಿರಲಿಲ್ಲ. ಮೊದಲ ಮೂರು ದಿನ ಈ ಪಾತ್ರದಲ್ಲಿ ತೊಡಗಿಸಿಕೊಳ್ಳುವುದು ಸವಾಲಾಗಿತ್ತು. ಬಳಿಕ ನಾಲ್ಕನೇ ದಿನಕ್ಕೆ ಪಾತ್ರವಾಗಿ ಹೋದೆ. ಸುಮಾರು ಒಂದೂವರೆ ತಿಂಗಳ ಕಾಲ ಸತತ ಚಿತ್ರೀಕರಣ ಮಾಡಿದ್ದೇವೆ’ ಎಂದು ಖುಷಿ ಹಂಚಿಕೊಂಡರು.