

ಬೆಂಗಳೂರು: ಪುನೀತ್ ರಾಜಕುಮಾರ್ ಅಗಲಿ 11 ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಸೋಮವಾರ ಅವರ 11ನೇ ದಿನದ ತಿಥಿ ಕಾರ್ಯ ನೆರವೇರಿದೆ. ಮೊದಲಿಗೆ ಸದಾಶಿವನಗರದ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕುಟುಂಬಸ್ಥರು, ಬಳಿಕ ಕಂಠೀರವ ಸ್ಟುಡಿಯೋದಲ್ಲಿನ ಸಮಾಧಿ ಸ್ಥಳಕ್ಕೆ ಆಗಮಿಸಿ ತಿಥಿ ಕಾರ್ಯ ಮುಗಿಸಿದ್ದಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಪುನೀತ್ ಪತ್ನಿ ಅಶ್ವಿನಿ ಮಕ್ಕಳಾದ ಧೃತಿ ಮತ್ತು ವಂದಿತಾ, ಸಹೋದರರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಶ್ರೀಮುರಳಿ ಸೇರಿ ಕುಟುಂಬಸ್ಥರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ತಿಥಿ ಕಾರ್ಯದ ಹಿನ್ನೆಲೆಯಲ್ಲಿ ಸ್ಟುಡಿಯೋದಲ್ಲಿನ ಅಪು್ಪ ಸಮಾಧಿಗೆ ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ಮಾಂಸಾಹಾರದ ನೈವೇದ್ಯ: ಪುನೀತ್ ಮಾಂಸಾಹಾರ ಪ್ರಿಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದೇ ರೀತಿ ತಿಥಿ ಕಾರ್ಯಕ್ಕೂ ಹಲವು ಬಗೆಯ ಮಾಂಸಾಹಾರದ ಭಕ್ಷ್ಯಗಳನ್ನು ನೈವೇದ್ಯಕ್ಕೆ ಇಡಲಾಗಿತ್ತು. ಚಿಕನ್ ಬಿರಿಯಾನಿ, ಚಿಕನ್ ಕಬಾಬ್, ಕೈಮಾ ಉಂಡೆ, ಮಟನ್ ಸೂಪ್ ಸೇರಿ ಹಲವು ಬಗೆಯ ಅಡುಗೆಯನ್ನು ಅರ್ಪಿಸಲಾಯಿತು.
ಸಮಾಧಿ ಬಳಿ ಅನ್ನಸಂತರ್ಪಣೆ: ಕುಟುಂಬದವರಿಂದ ಪೂಜೆ ಮುಗಿಯುವ ವರೆಗೂ ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿತ್ತು. ಮಧ್ಯಾಹ್ನ 12 ಗಂಟೆ ನಂತರ ಸಾಕಷ್ಟು ಅಭಿಮಾನಿಗಳು ಆಗಮಿಸಿ ಸಮಾಧಿ ದರ್ಶನ ಪಡೆದರು. ಈ ವೇಳೆ ಅಲ್ಲೇ ಇದ್ದ ಶಿವರಾಜಕುಮಾರ್ ಹಲವರಿಗೆ ಅನ್ನಸಂತರ್ಪಣೆ ಮಾಡಿದರು. ಇದೇ ವೇಳೆ ತಮಿಳು ನಟ ಸಿದ್ಧಾರ್ಥ್ ಸಹ ಆಗಮಿಸಿ ಪುನೀತ್ ಸಮಾಧಿಗೆ ಭೇಟಿ ನೀಡಿ, ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡರು.
ಮನೆಗೆ ಗಣ್ಯರು: ಮನೆಯಲ್ಲಿ ನಡೆದ ಪುನೀತ್ ಅವರ ಪುಣ್ಯತಿಥಿಯಲ್ಲಿ ಕುಟುಂಬದವರಲ್ಲದೆ, ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಸುನೀಲ್ ಕುಮಾರ್, ಮುರುಗೇಶ ನಿರಾಣಿ, ಶಿವರಾಮ ಹೆಬ್ಬಾರ್, ಸಂಸದೆ ಸುಮಲತಾ ಅಂಬರೀಷ್, ನಟ-ನಟಿಯರಾದ ಬಿ. ಸರೋಜಾ ದೇವಿ, ಉಮಾಶ್ರೀ, ಭವ್ಯಾ, ರವಿಚಂದ್ರನ್, ಉಪೇಂದ್ರ, ಹಂಸಲೇಖ, ದರ್ಶನ್, ಗಣೇಶ್, ‘ದುನಿಯಾ ವಿಜಯ್’, ಧನಂಜಯ್, ಅಭಿಷೇಕ್ ಅಂಬರೀಷ್, ಅಜೇಯ್ ರಾವ್, ವಸಿಷ್ಠ ಸಿಂಹ, ಮೇಘನಾ ರಾಜ್, ಶ್ರುತಿ, ದೊಡ್ಡಣ್ಣ ಮುಂತಾದವರು ಹಾಜರಿದ್ದರು.
ಪುನೀತ್ ಅವರ ಪುಣ್ಯತಿಥಿಯ ಅಂಗವಾಗಿ ಮಂಗಳವಾರ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಮಧ್ಯಾಹ್ನ 11ರಿಂದ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ. ಡಾ. ರಾಜ್ ಕುಟುಂಬದವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಪುನೀತ್ ಅವರ ಸಾವಿರಾರು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆ. 600ಕ್ಕೂ ಹೆಚ್ಚು ಬಾಣಸಿಗರು ಅಡುಗೆ ಕೆಲಸದಲ್ಲಿ ನಿರತರಾಗಿದ್ದು, ಮಾಂಸಾಹಾರ ಹಾಗೂ ಶಾಖಾಹಾರದ ಊಟವನ್ನು ವ್ಯವಸ್ಥೆ ಮಾಡಲಾಗಿದೆ.
ನಟ ಪುನೀತ್ ರಾಜಕುಮಾರ ಹೆಸರಲ್ಲಿ ಬಡಮಕ್ಕಳಿಗಾಗಿ ಉಚಿತವಾಗಿ ಬಳ್ಳಾರಿ ನಗರದಲ್ಲಿ ಶಾಲೆ ಆರಂಭಿ ಸಲಾಗುವುದು. ಪುನೀತ್ ವಯಸ್ಸಿನಲ್ಲಿ ನನಗಿಂತ ಚಿಕ್ಕವರಾದರೂ ಅವರ ಮಾರ್ಗದಲ್ಲಿ ನಾನೂ ಊರಿನ ಜನರಿಗೆ ಸಹಾಯ ಮಾಡುವೆ.| ಜನಾರ್ದನ ರೆಡ್ಡಿ ಮಾಜಿ ಸಚಿವಅಂದೊಂದಿತ್ತು ಕಾಲ ತಂಡದಿಂದ ಅನ್ನದಾನ: ಪುನೀತ್ ಅವರ ಪುಣ್ಯತಿಥಿಯ ಅಂಗವಾಗಿ ಅವರ ಅಭಿಮಾನಿಗಳು ಹಲವೆಡೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಆಯೋಜಿಸಿದ್ದರು. ‘ಅಂದೊಂದಿತ್ತು ಕಾಲ’ ಚಿತ್ರದ ನಿರ್ವಪಕ ಸುರೇಶ್, ತಮ್ಮ ನಾಗರಬಾವಿ ರಸ್ತೆಯ ಕಚೇರಿಯ ಬಳಿ ಅನ್ನಸಂತರ್ಪಣೆಯನ್ನು ಆಯೋಜಿಸಿದ್ದು, ಈ ಸಂದರ್ಭದಲ್ಲಿ ನೂರಾರು ಮಂದಿಗೆ ಅನ್ನದಾನ ಮಾಡಲಾಯಿತು. ಅದೇ ರೀತಿ ರಾಜ್ಯದ ಇತರೆಡೆಗಳಲ್ಲೂ ಪುನೀತ್ ನೆನಪಲ್ಲಿ ಅನ್ನದಾನ ಮಾಡಲಾಯಿತು.
ಧನ್ಯವಾದ ತಿಳಿಸಿದ ಅಶ್ವಿನಿ: ಪುನೀತ್ ಅಗಲಿಕೆಯ ಅಪಾರ ದುಃಖದ ನಡುವೆಯೂ ಅವರ ಪತ್ನಿ ಅಶ್ವಿನಿ, ಗೃಹ ಸಚಿವರು ಮತ್ತು ಪೊಲೀಸ್ ಇಲಾಖೆಗೆ ಪತ್ರ ಬರೆದು ಧನ್ಯವಾದ ಸಲ್ಲಿಸಿದ್ದಾರೆ. ‘ನಮ್ಮ ನೋವನ್ನು ಅಡಗಿಸಿಟ್ಟುಕೊಂಡು ಅವರನ್ನು ಸಕಲ ಗೌರವಗಳೊಂದಿಗೆ ಕಳುಹಿಸಿಕೊಡಬೇಕಿತ್ತು. ಅಂತಿಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಿ, ಮೆರವಣಿಗೆ ಹಾಗೂ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಸಾಕಷ್ಟು ಪೊಲೀಸ್ ನಿಯೋಜಿಸಿ, ಕಾನೂನು ವ್ಯವಸ್ಥೆಗೆ ಎಲ್ಲಿಯೂ ಧಕ್ಕೆ ಆಗದಂತೆ ನೋಡಿಕೊಂಡಿದ್ದೀರಿ. ನಮ್ಮ ಇಡೀ ಕುಟುಂಬ ಹಾಗೂ ಎಲ್ಲ ಅಭಿಮಾನಿಗಳ ಪರವಾಗಿ ನಿಮಗೆ ಮತ್ತು ಎಲ್ಲ ಸಿಬ್ಬಂದಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.
ಪರೀಕ್ಷೆ ಬರೆದ ಪುನೀತ್ ಪುತ್ರಿ: ಅಪ್ಪನನ್ನು ಕಳೆದುಕೊಂಡ ನೋವಿನಲ್ಲಿರುವ ಪುನೀತ್ ಅವರ ಎರಡನೇ ಮಗಳು ವಂದಿತಾ, ಆ ನೋವಿನಲ್ಲೇ ಪರೀಕ್ಷೆ ಬರೆದಿದ್ದಾರೆ. ವಂದಿತಾ, ಪ್ಯಾಲೇಸ್ ರಸ್ತೆಯಲ್ಲಿರುವ ಸೋಫಿಯಾ ಶಾಲೆಯಲ್ಲಿ ಐಸಿಎಸ್ಇ 10ನೇ ತರಗತಿ ಓದುತ್ತಿದ್ದಾರೆ. ಮುಂದಿನ ವಾರ ಸೆಮಿಸ್ಟರ್ ಪರೀಕ್ಷೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಪೂರ್ವ ತಯಾರಿ ಪರೀಕ್ಷೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ವಂದಿತಾ ಪರೀಕ್ಷೆ ಬರೆದು ಬಂದಿದ್ದಾರೆ.