

ಸುಶಾಂತ್ ಸಿಂಗ್ ರಜಪೂತ್ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ, ಗಾಡ್ಫಾದರ್ ಇಲ್ಲದೆ ಬಾಲಿವುಡ್ ಪ್ರವೇಶಿಸಿದವರು. ಕಿರುತೆರೆ ಮೂಲಕವೇ ಎಲ್ಲರನ್ನು ಸೆಳೆದು, ಅದರ ಖ್ಯಾತಿಯ ಮೂಲಕ ಸಿನಿಮಾರಂಗದಲ್ಲೂ ಯಶಸ್ಸು ಕಂಡವರು. ಹೀಗಿರುವಾಗ ಇದೇ ಸುಶಾಂತ್ ಇಲ್ಲವಾಗಿ ಇಂದಿಗೆ ಎರಡು ತಿಂಗಳಾಗುತ್ತ ಬಂತು. ಅವರ ಸಾವಿನ ಕುರಿತ ತನಿಖೆಯಲ್ಲಿ ಸಾಕಷ್ಟು ಬೆಳವಣಿಗೆಗಳಾಗುತ್ತಿದ್ದು, ಪ್ರಕರಣ ಸಿಬಿಐ ಕೈಗೆತ್ತಿಕೊಂಡಿದೆ.
ಇತ್ತ ಅಭಿಮಾನಿ ವಲಯದಲ್ಲೂ ಸುಶಾಂತ್ ಕುರಿತ ಸುದ್ದಿಗಳೇ ಚರ್ಚೆಯಾಗುತ್ತಿವೆ. ಅದರಲ್ಲೂ ಸುಶಾಂತ್ ನಟಿಸಿದ ಮೊದಲ ಧಾರಾವಾಹಿಯ ಮೊದಲ ದೃಶ್ಯವನ್ನು ಹಂಚಿಕೊಳ್ಳಿ ಎಂದು ನಿರ್ಮಾಪಕಿ ಏಕ್ತಾ ಕಪೂರ್ಗೆ ಸಾಕಷ್ಟು ಮಂದಿ ಮನವಿ ಮಾಡಿದ್ದರು.
ಅದರಂತೆ, ಅಭಿಮಾನಿಗಳ ಕೋರಿಕೆ ಮೇರೆಗೆ ಸುಶಾಂತ್ ಅವರ ಧಾರಾವಾಹಿಯ ಮೊದಲ ದೃಶ್ಯವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ ಏಕ್ತಾ. 2008ರಲ್ಲಿ ‘ಕಿಸ್ ದೇಶ್ ಮೇ ಹೈ ಮೇರಾ ದಿಲ್’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಸುಶಾಂತ್ ಎಂಟ್ರಿ ಕೊಟ್ಟಿದ್ದರು. ಮೊದಲ ದೃಶ್ಯದಲ್ಲಿಯೇ ಹೀರೋಯಿಸಂ ಮೂಲಕವೇ ರಜಪೂತ್ ಎದುರಾಗಿ ಎಲ್ಲರ ಹೃದಯ ಗೆದ್ದಿದ್ದರು. ಆ ಸನ್ನಿವೇಶದ ಬಗ್ಗೆ ಸ್ವತಃ ಏಕ್ತಾ ಕಪೂರ್ ಮಾತನಾಡಿದ್ದಾರೆ.
‘ಸಾಕಷ್ಟು ಮಂದಿ ಸುಶಾಂತ್ ಅವರ ಮೊದಲ ಸೀನ್ ಹೇಗಿದೆ ಎಂಬುದನ್ನು ನೋಡುವಂತೆ ಕೋರಿದ್ದರು. ಈ ದೃಶ್ಯವೇ ನೋಡಿ ಸುಶಾಂತ್ ಮೊದಲು ಫೇಸ್ ಮಾಡಿದ್ದು. 2008ರಲ್ಲಿ ಬಿತ್ತರವಾಗುತ್ತಿದ್ದ ‘ಕಿಸ್ ದೇಶ್ ಮೇ ಹೈ ಮೇರಾ ದಿಲ್’ ಧಾರಾವಾಹಿ ಇದು. ಇದರಲ್ಲಿ ಸೆಕೆಂಡ್ ಲೀಡ್ ಆಗಿ ಸುಶಾಂತ್ ಕಾಣಿಸಿಕೊಂಡಿದ್ದ’ ಎಂದು ಹೇಳಿ ಮತ್ತೊಮ್ಮೆ ಸುಶಾಂತ್ ಆತ್ಮಕ್ಕೆ ಶಾಂತಿ ಸಿಗಲೆಂದು ಹೇಳಿದ್ದಾರೆ. (ಏಜೆನ್ಸೀಸ್)