

ಬೆಂಗಳೂರು: ಕನ್ನಡದ ‘ಜಯಭೇರಿ’, ‘ರಣಚಂಡಿ’, ‘ಭೂತಯ್ಯನ ಮಕ್ಕಳು’ ಸೇರಿ 40 ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿರುವ ಖ್ಯಾತಿ ಹಿರಿಯ ನಿರ್ದೇಶಕ ಜಿ.ಕೆ.ಮುದ್ದುರಾಜ್‌ಗೆ ಸಲ್ಲುತ್ತದೆ. ಡಾ. ಅಂಬರೀಷ್, ಅನಂತ್ ನಾಗ್, ದೇವರಾಜ್, ಶಶಿಕುಮಾರ್, ಜಗ್ಗೇಶ್ ಅಂತಹ ದಿಗ್ಗಜರ ಚಿತ್ರಗಳನ್ನು ನಿರ್ದೇಶಿಸಿರುವ ಹೆಗ್ಗಳಿಕೆ ಅವರದು. ಇಂತಹ ಮುದ್ದುರಾಜ್ 2010ರಲ್ಲಿ ತೆರೆಕಂಡಿದ್ದ ‘ಖಡಕ್’ ಚಿತ್ರದ ಬಳಿಕ ಯಾವ ಚಿತ್ರವನ್ನೂ ನಿರ್ದೇಶಿಸಿರಲಿಲ್ಲ. ಇದೀಗ 15 ವರ್ಷಗಳ ಬಳಿಕ ಅವರು ಮತ್ತೆ ಡೈರೆಕ್ಟರ್ ಕ್ಯಾಪ್ ಧರಿಸುತ್ತಿದ್ದಾರೆ. ಸಿನಿಮಾ ಹೆಸರು ‘ಎಜುಕೇಟೆಡ್ ಬುಲ್ಸ್’. ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನದ ಜತೆಗೆ ನಿರ್ಮಾಣದ ಹೊಣೆಯನ್ನೂ ಅವರೇ ಹೊತ್ತಿದ್ದಾರೆ. ಇದು ಅವರ ನಿರ್ದೇಶನದ 41ನೇ ಚಿತ್ರವಾಗಿದ್ದು, ಇತ್ತೀಚೆಗೆ ಮುಹೂರ್ತ ನೆರವೇರಿಸಲಾಯಿತು. ಜಯರಾಮ್ ಸಿ.ಎ. ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರೆ, ಮಂಜುನಾಥ್ ಬಾಬು ಕ್ಯಾಮರಾಕ್ಕೆ ಚಾಲನೆ ನೀಡಿದರು. ಹಳ್ಳಿಯ ಪದವೀಧರನೊಬ್ಬ ಉದ್ಯೋಗದ ಸಲುವಾಗಿ ನಗರಕ್ಕೆ ಬರುತ್ತಾನೆ. ನಂತರ ಆತನ ಜೀವನದಲ್ಲಿ ಸ್ನೇಹ, ಪ್ರೀತಿ ಸೇರಿ ನಡೆಯುವ ನಾನಾ ಘಟನೆಗಳ ಸುತ್ತ ಕಥೆ ಸಾಗುತ್ತದೆ. ನೀರಜ್, ಅಜಯ್, ತೇಜಸ್, ರಾಕೇಶ್, ಪೂರ್ವಿಕಾ, ಮಾರುತಿ ರಾಜ್, ಚಿದಾನಂದ್ ಕಲಾಬಳಗದಲ್ಲಿದ್ದಾರೆ. ಧನುಷ್ ರಾಜಗೆರೆ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಚಿತ್ರಕ್ಕಿರಲಿದೆ.