ಎದೆ ತುಂಬಿ ಹಾಡುವೆನು ಇಂದಿನಿಂದ; ಎಸ್​ಪಿಬಿ ಕನಸಿನ ಕೂಸು ಮತ್ತೆ ಪ್ರೇಕ್ಷಕರ ಮುಂದೆ ...

Ede thumbi
Published on

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆದ ‘ಎದೆ ತುಂಬಿ ಹಾಡುವೆನು’ ಇಂದಿನಿಂದ (ಆ.14) ಮತ್ತೆ ಪ್ರಾರಂಭವಾಗುತ್ತಿದೆ. ಈ ಬಾರಿ ತೀರ್ಪಗಾರರಾಗಿ ಮತ್ತು ಮಾರ್ಗದರ್ಶಕರಾಗಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಇರದಿದ್ದರೂ, ಅವರು ಒಂದಲ್ಲ ಒಂದು ರೀತಿಯಲ್ಲಿ ಕಾರ್ಯಕ್ರಮದ ಭಾಗವಾಗಿರುತ್ತಾರಂತೆ. ಈಗಾಗಲೇ ಎಸ್​ಪಿಬಿ ಅವರನ್ನು ನೆನಪಿಸುವ ಪ್ರೋಮೋಗಳು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು, ಸಾಕಷ್ಟು ಜನಪ್ರಿಯವಾಗಿದೆ.

‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮವು ಮೂರು ವರ್ಷಗಳ ಹಿಂದೆಯೇ ಪ್ರಾರಂಭವಾಗಬೇಕಿತ್ತು ಎನ್ನುತ್ತಾರೆ ಕಲರ್ಸ್ ಕನ್ನಡದ ಕ್ಲಸ್ಟರ್ ಹೆಡ್ ಪರಮೇಶ್ವರ್ ಗುಂಡ್ಕಲ್. ಈ ಸಂಬಂಧ ವಾಹಿನಿಯು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತ್ತಂತೆ. ಆದರೆ, ಈ ಹಂತದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ವೈಯಕ್ತಿಕ ಕಾರಣಗಳಿಂದಾಗಿ ಸಾಧ್ಯವಾಗುತ್ತಿಲ್ಲ ಎಂದು ಎಸ್​ಪಿಬಿ ಹೇಳಿದ್ದರಂತೆ. ಅಷ್ಟೇ ಅಲ್ಲ, ಈ ಸಂಬಂಧ ಒಂದು ಪತ್ರವನ್ನೂ ಬರೆದಿದ್ದರಂತೆ. ‘ಬಿಳಿ ಹಾಳೆ ಮೇಲೆ ನೀಲಿ ಶಾಯಿಯಲ್ಲಿ ಅವರು ಬರೆದಿದ್ದ ಈ ಪತ್ರದಲ್ಲಿ ಅವರ ಹಾಡುಗಳಲ್ಲಿ ಇರುವಷ್ಟೇ ಜೀವಂತಿಕೆ ಇತ್ತು. ಅದನ್ನು ಅವರು ಸ್ಕಾ್ಯನ್ ಮಾಡಿ ಇ-ಮೇಲ್ ಮಾಡಿದ್ದರು. ಇದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರವಾಣಿಯಲ್ಲಿ ಚರ್ಚೆ ಮಾಡಿದ ನಂತರವೂ ಪ್ರೀತಿಯಿಂದ ಪತ್ರವನ್ನು ಬರೆದು ಕಳುಹಿಸಿಕೊಟ್ಟಿದ್ದು, ಈ ಕಾರ್ಯಕ್ರಮದ ಬಗ್ಗೆ ಅವರಿಗಿದ್ದ ಪ್ರೀತಿಯನ್ನು ತೋರಿಸುತ್ತದೆ’ ಎನ್ನುತ್ತಾರೆ ಪರಮೇಶ್ವರ್ ಗುಂಡ್ಕಲ್.

ಎಸ್​ಪಿಬಿ ಅವರು ಈಗಿಲ್ಲದಿದ್ದರೂ ಅವರ ಕನಸಿನ ಕೂಸಾದ ಈ ಕಾರ್ಯಕ್ರಮವನ್ನು ಮುಂದುವರಿಸಬೇಕೆಂಬ ನಿಟ್ಟಿನಲ್ಲಿ ಈಗ ವಾಹಿನಿಯು ‘ಎದೆ ತುಂಬಿ ಹಾಡುವೆನು’ ಮತ್ತೊಮ್ಮೆ ಶುರು ಮಾಡಿದೆ. ಎಸ್​ಪಿಬಿ ಅವರ ಮಗ ಎಸ್.ಪಿ. ಚರಣ್ ಮೊದಲ ಸಂಚಿಕೆಯಷ್ಟೇ ಅಲ್ಲ, ಆಗಾಗ ವಿಶೇಷ ತೀರ್ಪಗಾರರಾಗಿ ಭಾಗವಹಿಸಲಿದ್ದಾರಂತೆ. ಇನ್ನು, ಮುಖ್ಯ ತೀರ್ಪಗಾರರಾಗಿ ರಾಜೇಶ್ ಕೃಷ್ಣನ್, ವಿ. ಹರಿಕೃಷ್ಣ ಮತ್ತು ರಘು ದೀಕ್ಷಿತ್ ಭಾಗವಹಿಸಲಿದ್ದಾರೆ. ನಟಿ ಅಂಕಿತಾ ಅಮರ್ ಈ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮವು ಇಂದಿನಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

ಎಸ್​ಪಿಬಿ ನಮ್ಮ ಜೀವನದ, ವ್ಯವಸ್ಥೆಯ ಮತ್ತುಇತಿಹಾಸದ ಒಂದು ಭಾಗ. ಹಲವು ವರ್ಷಗಳ ಹಿಂದೆ ಅವರನ್ನು ಬಹಳ ಹತ್ತಿರದಲ್ಲಿ ನೋಡಿದ್ದೆ. ಅವರೊಂದಿಗಿನ ಒಡನಾಟವನ್ನು ಮತ್ತು ಅವರಿಂದ ಕಲಿತಿದ್ದನ್ನು ಸ್ಪರ್ಧಿಗಳಿಗೆ ಹಂತಹಂತವಾಗಿ ಹೇಳುವ ಆಸೆ.

| ರಾಜೇಶ್ ಕೃಷ್ಣನ್ ತೀರ್ಪುಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net