

ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಹಾಗೂ ನಟ ಜಗ್ಗೇಶ್ ಕಾಂಬಿನೇಶನ್‌ನಲ್ಲಿ 2009ರಲ್ಲಿ ತೆರೆಕಂಡಿದ್ದ ಸಿನಿಮಾ ‘ಎದ್ದೇಳು ಮಂಜುನಾಥ’. ದೊಡ್ಡ ಮಟ್ಟದಲ್ಲಿ ಹಿಟ್ ಆಗುವುದರ ಜತೆಗೆ ‘ಅತ್ಯುತ್ತಮ ಚಿತ್ರಕಥೆ’ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಪಡೆದಿದ್ದ ಚಿತ್ರ. 15 ವರ್ಷಗಳ ಬಳಿಕ ಗುರುಪ್ರಸಾದ್ ‘ಎದ್ದೇಳು ಮಂಜುನಾಥ-2’ ಸಿನಿಮಾ ಆರಂಭಿಸಿದ್ದರು. ಇಲ್ಲಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುವುದರ ಜತೆಗೆ ಜಗ್ಗೇಶ್ ಬದಲಿಗೆ ತಾವೇ ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಗುರುಪ್ರಸಾದ್‌ಗೆ ‘ರಂಗನಾಯಕ’ ಖ್ಯಾತಿಯ ರಚಿತಾ ಮಹಾಲಕ್ಷ್ಮೀ ಜೋಡಿಯಾಗಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿ, ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿರುವಾಗಲೇ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದರು. ಈ ಮಧ್ಯೆ ಎದೆಗುಂದದ ಚಿತ್ರತಂಡವು ಈಗ ಸಿನಿಮಾದ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಿದ್ದು, ಫೆ.21ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಅಗಲಿದ ನಿರ್ದೇಶಕನ ನೆನಪಲ್ಲಿ ಚಿತ್ರದ ಮೊದಲ ಸಾಂಗ್ ‘ಕಿತ್ತೋದ ಪ್ರೇಮ’ ಬಿಡುಗಡೆ ಮಾಡಿದೆ. ಶರತ್ ಲೋಹಿತಾಶ್ವ, ‘ಗುರುಪ್ರಸಾದ್ ಇದ್ದಿದ್ದರೆ ಈ ಆಡಿಟೋರಿಯಂನಲ್ಲಿ ನಗು, ಅವರ ಮಾತಿನ ಅಬ್ಬರ ಇರುತ್ತಿತ್ತೇನೊ? ಅದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬ ಕಲಾವಿದರಿಗೂ ಒಬ್ಬ ಒಳ್ಳೆ ನಿರ್ದೇಶಕರ ಜತೆ ಕೆಲಸ ಮಾಡಬೇಕು ಎಂಬ ಆಸೆ ಇರುತ್ತದೆ. ಆ ಆಸೆ ಗುರುಪ್ರಸಾದ್ ಕೊನೆಯ ಚಿತ್ರದಲ್ಲಿ ಈಡೇರಿದೆ’ ಎಂದರು. ನಟಿ ರಚಿತಾ, ‘ನಾನು ‘ರಂಗನಾಯಕ’ಗಿಂತ ಮೊದಲು ಈ ಸಿನಿಮಾಗೆ ಸಹಿ ಮಾಡಿದ್ದೆ. 2020ರಲ್ಲಿ ಚಿತ್ರೀಕರಣ ಮಾಡಿದ್ದು, ಈ ದಾರಿ ಬಹಳ ಸುಲಭವಾಗಿರಲಿಲ್ಲ’ ಎಂದರು. ಉಳಿದಂತೆ ಚೈತ್ರಾ ಆಚಾರ್, ವಿಘ್ನೇಶ್ ಕಟ್ಟಿ, ರವಿ ದೀಕ್ಷಿತ್ ತಾರಾಬಳಗದಲ್ಲಿದ್ದಾರೆ. ಅಶೋಕ್ ಸಾಮ್ರಾಟ್ ಛಾಯಾಗ್ರಹಣ, ಉದಯ್ ಸಂಕಲನ ಚಿತ್ರಕ್ಕಿದೆ. ‘ಎದ್ದೇಳು ಮಂಜುನಾಥ 2’ ಚಿತ್ರದ ಗಳಿಕೆಯಿಂದ ಬರುವ ಲಾಭದ ಶೇಕಡಾ 50ರಷ್ಟನ್ನು ನಿರ್ದೇಶಕ ಗುರುಪ್ರಸಾದ್ ಪುತ್ರಿ ನಗು ಶರ್ಮಾ ಭವಿಷ್ಯಕ್ಕೆ ಮೀಸಲಿಡಲು ಚಿತ್ರತಂಡ ನಿರ್ಧರಿಸಿದೆ.