ಎಡಗೈ ಅಪಘಾತಕ್ಕೆ ಕಾರಣ: ಇದೇ ಶುಕ್ರವಾರ ತೆರೆಗೆ ಬರಲಿದೆ ದಿಗಂತ್, ನಿಧಿ ಕ್ರೈಮ್ ಥ್ರಿಲ್ಲರ್

fotojet
Published on

ಬೆಂಗಳೂರು: ಎಡಗೈ ಹೆಚ್ಚು ಬಳಕೆ ಮಾಡುವುದನ್ನು ಅಪಶಕುನ ಎಂಬಂತೆ ಬಿಂಬಿಸಲಾಗುತ್ತದೆ. ಅದರಲ್ಲೂ ಲ್‌ಟೆ ಹ್ಯಾಂಡರ್‌ಗಳನ್ನು ನೋಡುವ ರೀತಿಯೇ ಬೇರೆ. ಹೀಗಿರುವಾಗ, ಅವರ ಬದುಕಿನ ವಿವಿಧ ಅಂಶಗಳನ್ನಿಟ್ಟುಕೊಂಡು ಕನ್ನಡದಲ್ಲಿ ‘ಎಡಗೈಯೇ ಅಪಘಾತಕ್ಕೆ ಕಾರಣ’ ಎಂಬ ಸಿನಿಮಾ ಬರುತ್ತಿದೆ. ಈ ವಿಭಿನ್ನ ಕ್ರೈಮ್ ಥ್ರಿಲ್ಲರ್ ಕಥೆಗೆ ಸಮರ್ಥ್ ಬಿ. ಕಡಕೋಳ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ದಿಗಂತ್ ಹಾಗೂ ನಿಧಿ ಸುಬ್ಬಯ್ಯ ಮುಖ್ಯಭೂಮಿಕೆಯಲ್ಲಿದ್ದು, ‘ಪಂಚರಂಗಿ’ ತೆರೆಕಂಡ 15 ವರ್ಷಗಳ ಬಳಿಕ ಇಬ್ಬರು ಮತ್ತೆ ಒಂದಾಗಿದ್ದಾರೆ. ಧನು ಹರ್ಷ, ಸೌರವ್ ಲೋಕೇಶ್, ನಿರೂಪ್ ಭಂಡಾರಿ, ರಾಧಿಕಾ ನಾರಾಯಣ್ ಕಲಾಬಳಗದಲ್ಲಿದ್ದಾರೆ. ಇದೇ 13ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

ನಿರ್ದೇಶಕ ಸಮರ್ಥ್, ‘ಎಡಗೈಯಿಂದ ತೆಗೆದುಕೊಳ್ಳುವುದು ಹಾಗೂ ಕೊಡುವುದನ್ನು ಅಪಶಕುನ ಎಂಬಂತೆ ಬಿಂಬಿಸಲಾಗುತ್ತದೆ. ಇದನ್ನು ಎಡಗೈ ಹೆಚ್ಚು ಬಳಸುವವರು ಎದುರಿಸಿರುತ್ತಾರೆ. ಜಗತ್ತಿನ ಎಲ್ಲ ವಸ್ತುಗಳನ್ನು ಬಲಗೈ ಬಳಕೆಗೆ ತಕ್ಕಂತೆ ತಯಾರಿಸಲಾಗಿದೆ. ಹೀಗಿರುವಾಗ, ಲ್‌ಟೆ ಹ್ಯಾಂಡರ್ಸ್ ಗೋಳು ಹೇಳತೀರದು. ನಮ್ಮ ಡೈರೆಕ್ಷನ್ ಟೀಂನಲ್ಲಿ ಒಬ್ಬರು ಲ್‌ಟೆ ಹ್ಯಾಂಡರ್ ಇದ್ದರು. ಅವರು ಹಲವು ಚಾಲೆಂಜ್ ಎದುರಿಸಿರುವುದನ್ನು ನೋಡಿದ್ದೇವೆ. ಇನ್ನು ಮುಂಬೈನಲ್ಲಿ ಲ್‌ಟೆ ಹ್ಯಾಂಡರ್ ವಿದ್ಯಾರ್ಥಿನಿಯೊಬ್ಬಳು ಪೆನ್ಸಿಲ್ ಶಾರ್ಪ್ ಮಾಡಲು ತುಂಬಾ ಹರಸಾಹಸಪಡುತ್ತಿದ್ದಳು. ಇದನ್ನು ಗಮನಿಸಿದ ಆಕೆಯ ತಾಯಿ, ಆ ಕಂಪನಿಗೆ ಪತ್ರ ಬರೆದು ಲ್‌ಟೆ ಹ್ಯಾಂಡರ್ಸ್‌ಗೆ ಅನುಕೂಲವಾಗುವಂತೆ ಪೆನ್ಸಿಲ್ ತಯಾರಿಸಿ ಎಂದು ಒತ್ತಾಯಿಸಿದ್ದರು. ಈ ಎರಡು ವಿಷಯಗಳ ಜತೆಗೆ ನಾವು ವಿಸ್ತೃತ ಅಧ್ಯಯನ ಮಾಡಿ, ಈ ಕಥೆಯನ್ನು ಸಿದ್ಧ ಮಾಡಿಕೊಂಡೆವು. ಇದೀಗ ಸಿನಿಮಾ ತೆರೆ ಮೇಲೆ ಬರಲು ಸಿದ್ಧವಾಗಿದೆ’ ಎಂದು ಮಾಹಿತಿ ನೀಡುತ್ತಾರೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ. 35 ದಿನಗಳ ಕಾಲ ಬೆಂಗಳೂರಿನಲ್ಲಿಯೇ ಶೂಟಿಂಗ್ ನಡೆಸಲಾಗಿದೆ. ಕಥೆ ತುಂಬ ಇಷ್ಟವಾದ ಕಾರಣ ನಟ ದಿಗಂತ್ ಸಂಭಾವನೆ ಪಡೆಯದೇ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net