ಚಂದನವನಕ್ಕಿದೆಯಾ ನಶೆಯ ನಂಟು?

Drugs
Published on

ಸಿನಿಮಾ ಕಲಾವಿದರು ಮತ್ತು ಸಂಗೀತಗಾರರಿಗೆ ಡ್ರಗ್ ಪೂರೈಕೆ ಮಾಡುವ ವಿಚಾರ ಸದ್ಯ ಸ್ಯಾಂಡಲ್​ವುಡ್​ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​ನ ಖ್ಯಾತ ಗಾಯಕ, ಗಾಯಕಿಯರು ಮತ್ತು ನಟರು ವಿಜಯವಾಣಿ ಜತೆಗೆ ಮಾತನಾಡಿದ್ದಾರೆ.

ಚಂದನವನಕ್ಕೆ ತಳುಕು ಹಾಕಬೇಡಿ...

ಸ್ಯಾಂಡಲ್​ವುಡ್​ನಲ್ಲಿ ಇಲ್ಲಿಯವರೆಗೂ ಡ್ರಗ್ ಜಾಲದ ಬಗ್ಗೆ ಕೇಳಿಲ್ಲ. ಆದರೆ ಬಾಲಿವುಡ್​ನಲ್ಲಿ ಈ ರೀತಿ ಡ್ರಗ್ ಜಾಲ ಇದೆ ಎಂಬುದನ್ನು ಪತ್ರಿಕೆಗಳಲ್ಲಿ ಓದಿದ್ದೆ. ಸತತವಾಗಿ 48 ಗಂಟೆ ಶೂಟಿಂಗ್​ನಲ್ಲಿದ್ದರೆ, ಅದೇ ಚಾಮ್ರ್ ಉಳಿಸಿಕೊಳ್ಳಲು ಡ್ರಗ್ ಸೇವಿಸುತ್ತಾರೆ ಎಂಬುದನ್ನು ಕೇಳಿದ್ದೆ. ಅದೇ ರೀತಿ ಕಾಲಿವುಡ್​ನಲ್ಲಿಯೂ ಒಂದು ಪ್ರಕರಣ ನನ್ನ ಕಿವಿಗೆ ಬಿದ್ದಿತ್ತು. ಇದೀಗ ಸ್ಯಾಂಡಲ್​ವುಡ್ ಹೆಸರೂ ತಳುಕು ಹಾಕಿಕೊಂಡಿದೆ. ಆದರೆ, ಈವರೆಗೆ ನಾನು ಸಾಕಷ್ಟು ಪಾರ್ಟಿಗಳಿಗೆ ಹೋಗಿದ್ದೇನೆ. ನಾನೇ ಪಾರ್ಟಿಗಳನ್ನು ಆಯೋಜಿಸಿದ್ದೇನೆ. ಡ್ರಗ್ ಬಗ್ಗೆ ಒಂದೇ ಒಂದು ಸಣ್ಣ ಸುಳಿವಾದರೂ ನನಗೆ ಸಿಕ್ಕಿರಬೇಕಿತ್ತು. ಬೇರೆಯವರು ಮಾಡಿರುವ ಕೃತ್ಯಕ್ಕೆ ಸ್ಯಾಂಡಲ್​ವುಡ್ ಲಿಂಕ್ಸ್ ಕೊಟ್ಟಿದ್ದಾರೆ. ನಿಜಕ್ಕೂ ಇದು ಭಯಹುಟ್ಟಿಸುವಂಥ ಸುದ್ದಿ.
| ಭುವನ್ ಪೊನ್ನಣ್ಣ, ನಟ

ಇಂಡಸ್ಟ್ರಿ ಮೇಲೆ ತಪ್ಪು ಹೊರಿಸಲಾಗುತ್ತಿದೆ..

ನಿಜಕ್ಕೂ ಇದು ಶಾಕಿಂಗ್ ವಿಚಾರ. ಸ್ಯಾಂಡಲ್​ವುಡ್​ನಲ್ಲಿ ಈ ರೀತಿ ಡ್ರಗ್ ಮಾಫಿಯಾ ನಡೆಯುತ್ತಿದೆ ಎಂಬುದನ್ನು ನಾನು ನಂಬುವುದಿಲ್ಲ. ಕಳೆದ 13 ವರ್ಷಗಳಿಂದ ನಾನು ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅದರಲ್ಲೂ ನಮ್ಮದು ಸಣ್ಣ ಇಂಡಸ್ಟ್ರಿ ಆಗಿರುವುದರಿಂದ, ಏನೇ ಸುದ್ದಿಯಾದರೂ ಬೇಗನೇ ಪಸರಿಸುತ್ತದೆ. ಹೀಗಿರುವಾಗ ಅಲ್ಲಿಂದ ಇಲ್ಲಿಯವರೆಗೂ ಈ ರೀತಿಯ ಒಂದೇ ಒಂದು ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ನನಗನಿಸಿದ ಮಟ್ಟಿಗೆ ಯಾರೋ ಮಾಡಿದ ತಪ್ಪನ್ನು ಇಂಡಸ್ಟ್ರಿ ಮೇಲೆ ಹೊರಸಿರಬಹುದು ಎಂಬ ಅನುಮಾನ ಮೂಡುತ್ತಿದೆ. ಇದರಿಂದ ಪಾರಾಗುವ ಉದ್ದೇಶದಿಂದ ಈ ಕೃತ್ಯ ಮಾಡಿರಬಹುದು. ಕರೊನಾ ಹಿನ್ನೆಲೆಯಲ್ಲಿ ಐದು ತಿಂಗಳಿಂದ ಸಂಗೀತ ಕ್ಷೇತ್ರದ ಕೆಲಸ ಸ್ಥಗಿತಗೊಂಡಿದೆ. ಯಾವುದೇ ಬಿಜಿನೆಸ್ ನಡೆಯುತ್ತಿಲ್ಲ. ಹೀಗಿರುವಾಗ ಈ ಥರದ ಆರೋಪ ಕೇಳಿಬಂದಿರುವುದು ಬೇಸರದ ಸಂಗತಿ.
| ಸುಪ್ರಿಯಾ ಲೋಹಿತ್, ಗಾಯಕಿ

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ ವಿಚಾರವಾಗಿ ಹರಿದಾಡಿದ ಮಾಹಿತಿಯನ್ನು ಪತ್ರಿಕೆಯಲ್ಲಿ ಓದಿದ್ದೇನೆ ಟಿವಿಗಳಲ್ಲಿ ನೋಡಿದ್ದೇನೆ. ಅಷ್ಟಕ್ಕೂ ಏನಿದು ಎಂಬುದೇ ಅರ್ಥ ಆಗುತ್ತಿಲ್ಲ. ಕುತೂಹಲ ಮೂಡಿಸಲು ಈ ರೀತಿಯ ಸುದ್ದಿ ಮಾಡುತ್ತಿರಬಹುದು. ಇಂಡಸ್ಟ್ರಿ ಮೇಲೆ ಈ ರೀತಿಯ ಆರೋಪ ಮಾಡುವುದು ಸರಿಯಲ್ಲ. ಹಾಗಾಗಿ ಪೊಲೀಸ್ ಇಲಾಖೆ ಈ ಬಗ್ಗೆ ಖಚಿತ ಮಾಹಿತಿ ಪಡೆಯಬೇಕು. ಸೂಕ್ತ ಕ್ರಮಕ್ಕೆ ಮುಂದಾಗಬೇಕು.
|ಚಂದನ್ ಶೆಟ್ಟಿ, ಗಾಯಕ, ಸಂಗೀತ ನಿರ್ದೇಶಕ

ನನ್ನ ಪ್ರಕಾರ ಇದೊಂದು ವದಂತಿಯಷ್ಟೇ...

ಚಂದನವನದಲ್ಲಿ ಡ್ರಗ್ ಪ್ರಕರಣ ಸದ್ದು ಮಾಡುತ್ತಿದ್ದಂತೆ ನಾನು ಇದನ್ನೊಂದು ವದಂತಿ ರೂಪದಲ್ಲಿ ನೋಡುತ್ತಿದ್ದೇನೆ. ಏಕೆಂದರೆ, ಕಳೆದ 10 ವರ್ಷದಿಂದ ನಾನು ಸ್ಯಾಂಡಲ್​ವುಡ್ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದೇನೆ. ಅಲ್ಲಿಂದ ಇಲ್ಲಿಯವರೆಗೂ ಕಾಣದ ಇಂಥ ಪ್ರಕರಣ ಇದೀಗ ಒಮ್ಮಿಂದೊಮ್ಮೆ ಸದ್ದು ಮಾಡಲು ಕಾರಣವೇನು? ಇತ್ತೀಚಿನ ದಿನಗಳಲ್ಲಿ ಪರಭಾಷೆಯವರೂ ಕನ್ನಡ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಂದ ಈ ಆಪಾದನೆ ಹರಿದಾಡಿರಬಹುದು ಎಂಬುದು ನನ್ನ ವಾದ. ಇದಕ್ಕೂ ಹೆಚ್ಚಿನದನ್ನು ಹೇಳಬೇಕೆಂದರೆ ಚಂದನವನದ ವಾತಾವರಣವೇ ಬೇರೆ ಇದೆ. ಹೊರಗಿನ ಇಂಡಸ್ಟ್ರಿಗಳಂತೆ ಯಾವುದೇ ಕಾಂಟ್ರವರ್ಸಿಗಳು, ಗಾಸಿಪ್​ಗಳು ನಮ್ಮಲ್ಲಿ ಕಾಣಿಸುವುದು ತುಂಬ ಅಪರೂಪ.
| ಕಾರುಣ್ಯಾ ರಾಮ್ ನಟಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net