

ಬೆಂಗಳೂರು: ‘ಇದು ಗೆಲುವು ಎನ್ನುವುದಕ್ಕಿಂತ, ಪ್ರೂವ್ ಮಾಡುವುದಕ್ಕೆ ಸಿಕ್ಕ ಇನ್ನೊಂದು ಅವಕಾಶ ಎಂದು ಭಾವಿಸುತ್ತೇನೆ ...’ ‘ಸಲಗ’ ಚಿತ್ರ ಯಶಸ್ವಿಯಾದಾಗಲೂ, ‘ದುನಿಯಾ’ ವಿಜಯ್ ಹೆಚ್ಚು ಮಾತನಾಡಿರಲಿಲ್ಲ. ನಂದಮೂರಿ ಬಾಲಕೃಷ್ಣ ಅಭಿನಯದ ತೆಲುಗು ಚಿತ್ರದಲ್ಲಿ ವಿಲನ್ ಪಾತ್ರ ಮಾಡುವುದಕ್ಕೆ ಅವಕಾಶ ಸಿಕ್ಕಾಗಲೂ ಹೆಚ್ಚು ಮಾತನಾಡಿರಲಿಲ್ಲ. ಈಗ ವಿಜಯ್ ಒಂದಿಷ್ಟು ಮಾತನಾಡಿದ್ದಾರೆ. ತಾವು ನಡೆದು ಬಂದ ಹಾದಿಯ ಬಗ್ಗೆ, ತೆಲುಗಿನಲ್ಲಿ ಸಿಕ್ಕ ಅವಕಾಶದ ಬಗ್ಗೆ ಒಂದಿಷ್ಟು ವಿಷಯಗಳನ್ನು ಮನಬಿಚ್ಚಿ ಹಂಚಿಕೊಂಡಿದ್ದಾರೆ.
ವಿಜಯ್ ಹೀರೋ ಆಗಿ ನಟಿಸುವುದನ್ನು ಪ್ರಾರಂಭ ಮಾಡಿ 15 ವರ್ಷಗಳಾಗಿವೆ. ಈ 15 ವರ್ಷಗಳಲ್ಲಿ ಅವರು ನಟಿಸಿದ ಚಿತ್ರಗಳ ಸಂಖ್ಯೆ 30 ಇರಬಹುದು. ಚಿತ್ರಗಳ ಸಂಖ್ಯೆ ಕಡಿಮೆಯಾಗಲಿಲ್ಲವಾ ಎಂದರೆ, ಖಂಡಿತಾ ಹೌದು ಎಂದು ಒಪ್ಪಿಕೊಳ್ಳುತ್ತಾರೆ. ‘ಇಲ್ಲಿ ನಾನೇ ಇಂಜಿನ್, ನಾನೇ ಗಾಡಿ. ಇಂಜಿನ್ ಕೆಟ್ಟಾಗ ನಾನೇ ರಿಪೇರಿ ಮಾಡಿಕೊಂಡು ಮುನ್ನಡೆಯಬೇಕಿತ್ತು. ಇದೆಲ್ಲದರಿಂದ ಹೆಚ್ಚು ಚಿತ್ರಗಳಲ್ಲಿ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ. ಇನ್ನು ಮುಂದೆ ನನ್ನ ಕೆಲಸ ಮಾತನಾಡುತ್ತದೆ ಎಂಬ ನಂಬಿಕೆ ಇದೆ. ತಲೆ ಬಗ್ಗಿಸಿಕೊಂಡು ಮುಂದೆ ನಡೆಯುತ್ತೇನೆ. ಗೆಲುವನ್ನು ತಲೆಗೆ ತೆಗೆದುಕೊಳ್ಳದೆಯೇ, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತೇನೆ’ ಎನ್ನುತ್ತಾರೆ.
ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ: ಬದುಕು ಎಂದರೆ ಏರುಪೇರು ಸಹಜ ಎನ್ನುವ ವಿಜಯ್, ‘ನನಗೆ ಮೊದಲಿನಿಂದಲೂ ಗೊತ್ತಿರುವುದು ಸಿನಿಮಾ ಮಾತ್ರ. ಅದರಿಂದಲೇ ನನಗೆ ಹೆಸರು ಬಂದಿತ್ತು. ಅದರಿಂದಲೇ ಬೇರೆ ಎಲ್ಲವೂ ಆಯ್ತು. ಬಹುಶಃ ನಾನೊಬ್ಬ ಸಾಮಾನ್ಯ ಮನುಷ್ಯನಾಗಿದ್ದರೆ ಇಷ್ಟೆಲ್ಲ ಎದುರಿಸಬೇಕಾಗಿರಲಿಲ್ಲ. ಕೆಲವೊಮ್ಮೆ ನನ್ನ ಭಾವನೆಗಳೇ ನನಗೆ ಮುಳುವಾಯಿತು. ಹಾಗಾಗಿ, ಕೆಲವು ಸಮಸ್ಯೆಗಳು ಎದುರಾದವು. ಈಗ ಹಾಗಿಲ್ಲ. ಎಲ್ಲವನ್ನೂ ಎದುರಿಸುವ ಮೆಚ್ಯುರಿಟಿ ಇದೆ’ ಎನ್ನುತ್ತಾರೆ.
ಲಾಂಗ್-ಮಚ್ಚು ನಂತರ: ವಿಜಯ್ಗೆ ಎಲ್ಲ ಭಾಷೆಗಳಲ್ಲೂ ನಟಿಸಬೇಕೆಂಬ ಆಸೆ ಇತ್ತಂತೆ. ಆದರೆ, ಆ ಅವಕಾಶ ತಡವಾಗಿ ಬಂದಿದೆ. ‘ಸ್ವಲ್ಪ ತಡವಾದರೂ ಒಂದೊಳ್ಳೆಯ ಚಿತ್ರದ ಮೂಲಕ ತೆಲುಗಿಗೆ ಹೋಗುತ್ತಿದ್ದೇನೆ ಎಂಬ ಖುಷಿ ಇದೆ. ಅಲ್ಲಿ ವಿಲನ್ ಪಾತ್ರ ಮಾಡುತ್ತಿದ್ದೇನೆ. ಒಬ್ಬ ಕಲಾವಿದನಿಗೆ ಬೇರೆಬೇರೆ ಪಾತ್ರಗಳನ್ನು ಮಾಡಿದರೆ ಸಮಾಧಾನವಿರುತ್ತದೆ. ಜತೆಗೆ ಅಭಿನಯಕ್ಕೆ ಸ್ಕೋಪ್ ಇರುವ ಪಾತ್ರ. ಹಾಗಾಗಿ, ಅಭಿನಯದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ಇರುವ ಪಾತ್ರಗಳನ್ನು ನಿರೀಕ್ಷೆ ಮಾಡುತ್ತಿದ್ದೇನೆ. ಲಾಂಗ್-ಮಚ್ಚು ನಂತರ’ ಎನ್ನುತ್ತಾರೆ.
ಸರಸ್ವತಿ ಇದ್ದಲ್ಲಿ ಲಕ್ಷ್ಮೀ
ಕನ್ನಡದಲ್ಲಿ ಆಕ್ಷನ್ ಹೀರೋ ಪಾತ್ರಗಳನ್ನೇ ವಿಜಯ್ ಹೆಚ್ಚು ಮಾಡಿದ್ದು. ಈಗಲೂ ಅದೇ ತರಹದ ಪಾತ್ರಗಳು ಸಿಗುತ್ತಿದೆಯಾ ಅಥವಾ ಪರಿಸ್ಥಿತಿ ಸುಧಾರಿಸಿದೆಯಾ ಎಂದರೆ, ‘ನಮ್ಮಲ್ಲಿ ಬರಹಗಾರರ ದೊಡ್ಡ ಕೊರತೆ ಇದೆ. ಮೊದಲು ನಾವು ಬರಹಗಾರರನ್ನು ಬೆಳೆಸಬೇಕು. ಎಲ್ಲಿ ಸರಸ್ವತಿ ಇರುವುದಿಲ್ಲವೋ, ಅಲ್ಲಿ ಲಕ್ಷ್ಮೀ ಇರುವುದಿಲ್ಲ. ಹಿಂದೆ ಬಹಳಷ್ಟು ಬರಹಗಾರರಿದ್ದರು. ಈಗ ಕಡಿಮೆಯಾಗಿದ್ದಾರೆ. ಅದಕ್ಕೆ ಕಾರಣ, ಅವರಿಗೆ ಸೂಕ್ತ ಗೌರವ ಮತ್ತು ಸಂಭಾವನೆ ಸಿಗುತ್ತಿಲ್ಲ. ನಮ್ಮಲ್ಲಿ ಪ್ರತಿಭಾವಂತರೇನೋ ಸಾಕಷ್ಟು ಜನ ಇದ್ದಾರೆ. ಆದರೆ, ಅವರಿಗೆ ಮನ್ನಣೆ ಸಿಗುತ್ತಿಲ್ಲ. ಮನ್ನಣೆ ಸಿಕ್ಕಾಗಲಷ್ಟೇ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಹಗಾರರು ಬರುವುದಕ್ಕೆ ಸಾಧ್ಯ’ ಎಂಬುದು ವಿಜಯ್ ಮಾತು.