

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ನಟ ದುನಿಯಾ ವಿಜಯ್ 2023ರ ತೆಲುಗು ಸಿನಿಮಾ "ವೀರಸಿಂಹರೆಡ್ಡಿ' ಮೂಲಕ ಟಾಲಿವುಡ್ಗೆ ಪದಾರ್ಪಣೆ ಮಾಡಿದ್ದರು. ನಾಯಕ ಬಾಲಯ್ಯ ವಿರುದ್ಧ ಮುಸಾಲಿ ಪ್ರತಾಪ್ ರೆಡ್ಡಿ ಎಂಬ ಖಡಕ್ ವಿಲನ್ ಪಾತ್ರದಲ್ಲಿ ತೊಡೆತಟ್ಟಿದ್ದರು. ವಿಜಯ್ ನಟನೆಗೆ ಅತ್ಯುತ್ತಮ ಖಳನಟ ಸೈಮಾ ಪ್ರಶಸ್ತಿಯೂ ಒಲಿದು ಬಂದಿತ್ತು. ಇದೀಗ ಅವರು ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. "ಮೂಕುತಿ ಅಮ್ಮನ್ 2: ಮಹಾಶಕ್ತಿ' ಚಿತ್ರದಲ್ಲಿ ದುನಿಯಾ ವಿಜಯ್ ವಿಲನ್ ಪಾತ್ರದಲ್ಲಿ ನಟಿಸಲಿದ್ದು, ಗುರುವಾರ ಚೆನ್ನೈನಲ್ಲಿ ಸಿನಿಮಾ ಮುಹೂರ್ತ ನೆರವೇರಿದೆ.
ಇದು 2020ರಲ್ಲಿ ರಿಲೀಸ್ ಆಗಿದ್ದ ಆರ್ಜೆ ಬಾಲಾಜಿ ನಟಿಸಿ, ನಿರ್ದೇಶಿಸಿದ್ದ "ಮೂಕುತಿ ಅಮ್ಮನ್' ಚಿತ್ರದ ಸೀಕ್ವೆಲ್ ಆಗಿದ್ದು, ಮೂಕುತಿ ಅಮ್ಮನಾಗಿ ನಯನತಾರಾ ನಟಿಸಿದ್ದರು. ಸೀಕ್ವೆಲ್ನಲ್ಲೂ ಅವರೇ ಮೂಕುತಿ ಅಮ್ಮನ ಪಾತ್ರದಲ್ಲಿ ಮುಂದುವರಿಯಲಿದ್ದು, ಈ ಚಿತ್ರಕ್ಕೆ ಸುಂದರ್.ಸಿ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಜತೆಗೆ ವಿಲನ್ ಪಾತ್ರಗಳಲ್ಲಿ ದುನಿಯಾ ವಿಜಿ, ಗರುಡಾ ರಾಮ್ ನಟಿಸಲಿದ್ದು, ರೆಜಿನಾ ಕೆಸಾಂಡ್ರಾ, ಯೋಗಿ ಬಾಬು, ಊರ್ವಶಿ, ಮೀನಾ, ಅಭಿನಯ, ಕೂಲ್ ಸುರೇಶ್ ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ ಈ ಪಾತ್ರಕ್ಕಾಗಿ ನಟಿ ನಯನತಾರಾ ಕಳೆದ ಒಂದು ತಿಂಗಳಿನಿಂದ ಉಪವಾಸ ಮಾಡುತ್ತಿದ್ದು, ಹಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರಂತೆ.
ನಿರ್ದೇಶಕ ಸುಂದರ್. ಸಿ, "ನಟ, ನಿರ್ದೇಶಕ, ಆ್ಯಕ್ಷನ್ ಹೀರೋ ಆಗಿ ದುನಿಯಾ ವಿಜಯ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಜತೆ ಕೆಲಸ ಮಾಡಬೇಕು ಅಂತ ನನಗೆ ಆಸೆಯಿತ್ತು. ದೊಡ್ಡ ಹೀರೋ ಆಗಿದ್ದರೂ ನಮ್ಮ ಚಿತ್ರದಲ್ಲಿ ನೆಗಟಿವ್ ಪಾತ್ರದಲ್ಲಿ ನಟಿಸಲು ಒಪ್ಪಿದ್ದಾರೆ. "ಮೂಕುತಿ ಅಮ್ಮನ್ 2' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಶುಭವಾಗಲಿ' ಎಂದು ದುನಿಯಾ ವಿಜಯ್ರನ್ನು ಕಾಲಿವುಡ್ಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ಕಳೆದ ವರ್ಷ "ಭೀಮ' ರಿಲೀಸ್ ಆದ ಬಳಿಕ, ಸದ್ಯ ದುನಿಯಾ ವಿಜಯ್ ನಾಲ್ಕು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. "ಕಾಟೇರ' ಕಥೆಗಾರ ಜಡೇಶ್ ಕೆ. ಹಂಪಿ ನಿರ್ದೇಶಿಸುತ್ತಿರುವ "ಲ್ಯಾಂಡ್ಲಾರ್ಡ್' ಚಿತ್ರದಲ್ಲಿ ವಿಜಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ವಿಜಿ ಪುತ್ರಿ ರಿತನ್ಯಾ ಕೂಡ ಸ್ಯಾಂಡಲ್ವುಡ್ಗೆ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. "ಸಲಗ', "ಭೀಮ' ಚಿತ್ರಗಳ ಯಶಸ್ಸಿನ ಬಳಿಕ ವಿಜಯ್, ನಿರ್ದೇಶಿಸುತ್ತಿರುವ ಮೂರನೇ ಸಿನಿಮಾ "ಸಿಟಿಲೈಟ್ಸ್'. ಈ ಚಿತ್ರದ ಮೂಲಕ ವಿಜಿ ಮತ್ತೊಬ್ಬ ಪುತ್ರಿ ಮೋನಿಷಾ ಚಿತ್ರರಂಗಕ್ಕೆ ಡೆಬ್ಯೂ ಮಾಡಲಿದ್ದು, ವಿನಯ್ ರಾಜಕುಮಾರ್ಗೆ ನಾಯಕಿಯಾಗಿದ್ದಾರೆ. ಜತೆಗೆ ಎಸ್. ನಾರಾಯಣ್ ನಿರ್ದೇಶನದಲ್ಲಿ ಶ್ರೇಯಸ್ ಕೆ. ಮಂಜು ಮತ್ತು ದುನಿಯಾ ವಿಜಯ್ ನಟಿಸಿರುವ "ಮಾರುತ' ಸದ್ಯ ಪೋಸ್ಟ್&ಪ್ರೊಡಕ್ಷನ್ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ.