

ಬೆಂಗಳೂರು: ‘ನಿಜಕ್ಕೂ ನಾನು ಭಾಗ್ಯವಂತೆ. ಅಪ್ಪನ ಸಿನಿಮಾದ ಮೂಲಕವೇ ಕಲಾವಿದೆಯಾಗುತ್ತಿದ್ದೇನೆ. ಇನ್ನು ಜಡೇಶ್ ಹಂಪಿ, ಸೂರಿ ಸರ್ ಜತೆ ಮೊದಲ ಎರಡು ಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆತಿದೆ. ‘ಲ್ಯಾಂಡ್‌ಲಾರ್ಡ್’ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಕೂಡ ಭಾಗ್ಯ. ಹೀಗಾಗಿ, ಎಲ್ಲ ರೀತಿಯಲ್ಲಿ ನೋಡಿದರೂ ನಾನು ತುಂಬಾ ಭಾಗ್ಯವಂತೆ ಅಂತ ಅನಿಸುತ್ತದೆ’- ಹೀಗೆ ವಿಜಯವಾಣಿ ಜತೆ ಸಂತಸ ಹಂಚಿಕೊಳ್ಳುತ್ತಾರೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ರಿತನ್ಯಾ ವಿಜಯ್.
ನಟ ದುನಿಯಾ ವಿಜಯ್ ಪುತ್ರಿ ರಿತನ್ಯಾ ‘ಲ್ಯಾಂಡ್‌ಲಾರ್ಡ್’ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಶನಿವಾರ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಚಿತ್ರತಂಡ ರಿತನ್ಯಾ ನಟಿಸುತ್ತಿರುವ ಭಾಗ್ಯ ಪಾತ್ರದ ಲುಕ್ ರಿಲೀಸ್ ಮಾಡಿ, ಉಡುಗೊರೆ ನೀಡಿದೆ. ‘ಪದವಿ ಮುಗಿದ ಬಳಿಕ ನಾನು ಆ್ಯಕ್ಟಿಂಗ್ ತರಬೇತಿಗಾಗಿ ಮುಂಬೈನ ಅನುಪಮ್ ಖೇರ್ ಆಕಾಡೆಮಿ ಸೇರಿದ್ದೆ. ಅದೇ ವೇಳೆ ‘ಲ್ಯಾಂಡ್‌ಲಾರ್ಡ್’ ಬರವಣಿಗೆ ಕೆಲಸಗಳು ನಡೆಯುತ್ತಿದ್ದವು. ಆ ಕಥೆಯಲ್ಲಿ ಮಗಳ ಪಾತ್ರ ಬರುತ್ತದೆ. ಅದಕ್ಕಾಗಿ ಹುಡುಕಾಟ ನಡೆದಿತ್ತು. ಅದೇ ವೇಳೆ ಜಡೇಶ್ ಸರ್‌ಗೆ ನಾನು ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆಯುತ್ತಿರುವುದು ಗೊತ್ತಾಗಿ ನಾನೇ ನಟಿಸಿದರೆ ಚೆನ್ನಾಗಿರುತ್ತದೆ ಎಂದು ಅಪ್ಪನಿಗೆ ತಿಳಿಸಿದ್ದಾರೆ. ಬಳಿಕ ಅಪ್ಪ ಕೂಡ ಒಪ್ಪಿ, ಸಿನಿಮಾಕ್ಕೆ ಸೇರಿಸಿಕೊಂಡರು. ಇಲ್ಲಿ ನನ್ನದು ಪೊಲೀಸ್ ಕಾನ್‌ಸ್ಟೇಬಲ್ ಭಾಗ್ಯ ಪಾತ್ರ. ‘ಭಾಗ್ಯ’ಳಾಗಿ ಕಾಣಿಸಿಕೊಳ್ಳಲು ತುಂಬಾ ಸಿದ್ಧತೆ ಮಾಡಿಕೊಂಡೆ. ಹಲವು ನೆಲ ಮೂಲ ಸೊಗಡಿನ ನಾಟಕಗಳನ್ನು ನೋಡಿದೆ. ಆ್ಯಕ್ಟಿಂಗ್ ಹೇಳಿಸಿಕೊಳ್ಳಲೆಂದೇ ಒಬ್ಬ ಟೀಚರ್ ನೇಮಕ ಮಾಡಿಕೊಂಡಿದ್ದೆವು. ಜತೆಗೆ ನಾನೂ ಸಾಕಷ್ಟು ಅಧ್ಯಯನ ಮಾಡಿದ್ದೇನೆ’ ಎಂದು ಮಾಹಿತಿ ಹಂಚಿಕೊಂಡರು.
‘ಕಾಗೆಬಂಗಾರ’ದಲ್ಲೂ ವಿಜಯ್ ಪುತ್ರಿ
ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ರಿತನ್ಯಾ, ಸೂರಿ ನಿರ್ದೇಶಿಸಲಿರುವ ‘ಕಾಗೆ ಬಂಗಾರ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ಆ ಚಿತ್ರದ ಪ್ರಿ-ಪ್ರೊಡಕ್ಷನ್ ನಡೆಯುತ್ತಿದ್ದು, ಶೂಟಿಂಗ್ ಆರಂಭವಾಗಬೇಕಿದೆ. ಜತೆಗೆ ಹಲವು ಕಥೆಗಳು ಬಂದಿದ್ದು, ಒಂದನ್ನು ಆಯ್ಕೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಆ ಸಿನಿಮಾ ಕೂಡ ಘೋಷಣೆಯಾಗಲಿದೆ. ಇನ್ನು ಸಿನಿಮಾಗಳ ಆಫರ್ ಅಪ್ಪನ ಮೂಲಕವೇ ಬರಬಹುದು. ಆದರೆ, ಆಯ್ಕೆ ಮಾತ್ರ ನನಗೆ ಬಿಟ್ಟಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ನಾನು ಸ್ವತಂತ್ರಳು’ ಎನ್ನುತ್ತಾರೆ ರಿತನ್ಯಾ.