

ಬೆಂಗಳೂರು: ಎರಡನೆಯ ಲಾಕ್ಡೌನ್ ಮುಗಿಯುತ್ತಿದ್ದಂತೆಯೇ ರವಿಚಂದ್ರನ್ ಅಭಿನಯದ ‘ದೃಶ್ಯ 2’ ಚಿತ್ರ ಸೆಟ್ಟೇರಿದ್ದು, ಒಂದೇ ತಿಂಗಳ ಅಂತರದಲ್ಲಿ ಚಿತ್ರೀಕರಣ ಮುಗಿದಿದ್ದು ಎಲ್ಲವೂ ಗೊತ್ತೇ ಇದೆ. ಈಗ ಆ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಡಿಸೆಂಬರ್ನಲ್ಲಿ ಬಿಡುಗಡೆ ಎಂಬ ಪೋಸ್ಟರ್ ಹೊರಬಿದ್ದಿದೆ.
ಶುಕ್ರವಾರ, ‘ದೃಶ್ಯ 2’ ಚಿತ್ರದ ಮೊದಲ ಪೋಸ್ಟರ್ ಹೊರಬಿದ್ದಿದ್ದು, ಡಿಸೆಂಬರ್ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಯಾವಾಗ? ಆ ಪ್ರಶ್ನೆಗೆ ಇನ್ನೂ ಉತ್ತರ ಸಿಗಬೇಕು. ಡಿಸೆಂಬರ್ 03ಕ್ಕೆ ಶ್ರೀಮುರಳಿ ಅಭಿನಯದ ‘ಮದಗಜ’ ಬಿಡುಗಡೆ. ಡಿ.10ಕ್ಕೆ ಶರಣ್ ಅಭಿನಯದ ‘ಅವತಾರ್ ಪುರುಷ’ ಬರಲಿದೆ. ಇನ್ನು, ಡಿ. 31ಕ್ಕೆ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ತೆರೆಕಾಣಲಿದೆ. ಈ ಮೂರು ಶುಕ್ರವಾರಗಳನ್ನು ಬಿಟ್ಟು, ಡಿ.17 ಅಥವಾ 24ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.
‘ದೃಶ್ಯ 2’ ಚಿತ್ರವನ್ನು ಯಾವುದೇ ಕಾರಣಕ್ಕೂ ಒಟಿಟಿಯಲ್ಲಿ ಬಿಡುಗಡೆ ಮಾಡುವುದಿಲ್ಲ, ಚಿತ್ರಮಂದಿರಗಳಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದು ರವಿಚಂದ್ರನ್ ಈಗಾಗಲೇ ಹೇಳಿದ್ದು, ಅದರಂತೆ ಚಿತ್ರವು ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆ. ಇನ್ನು, ‘ದೃಶ್ಯ 2’ಗೂ ಮುನ್ನವೇ ತೆಲುಗಿನಲ್ಲಿ ‘ದೃಶ್ಯಂ 2’ ಪ್ರಾರಂಭವಾಗಿತ್ತು. ಇದು ಸಹ ‘ದೃಶ್ಯ 2’ ತರಹವೇ ಮಲಯಾಳಂನ ಅದೇ ಹೆಸರಿನ ಚಿತ್ರದ ರೀಮೇಕ್. ಈ ಚಿತ್ರದ ಬಿಡುಗಡೆ ದಿನಾಂಕವೂ ಶುಕ್ರವಾರ ಹೊರಬಿದ್ದಿದೆ. ‘ವಿಕ್ಟರಿ’ ವೆಂಕಟೇಶ್ ಅಭಿನಯದ ತೆಲುಗಿನ ‘ದೃಶ್ಯಂ 2’ ಮೊದಲಿನಿಂದಲೂ ಒಟಿಟಿಯಲ್ಲಿ ಬರಲಿದೆ ಎಂದೇ ಹೇಳಲಾಗಿತ್ತು. ಅದರಂತೆ ಚಿತ್ರವು ಅಮೇಜಾನ್ ಪ್ರೖೆಮ್ಲ್ಲಿ ಚಿತ್ರ ನವೆಂಬರ್ 25ರಿಂದ ಸ್ಟ್ರೀಮ್ ಆಗಲಿದೆ.