

ಬೆಂಗಳೂರು: ಹರಿಯೋ ನೀರು.. ತೊಟ್ಟಿಕ್ಕುವ ರಕ್ತ.. ಸುರಿಯೋ ಮಳೆ.. ಗಾಳಿಯಲ್ಲಿ ತೇಲಿ ಬರುವ ಚಂದದ ಚಿಟ್ಟೆ.. ಪಿಳಿಪಿಳಿ ಕಣ್ಣು ಮಿಟುಕಿಸುವ ಕಂದಮ್ಮ.. ಮಚ್ಚು-ಹೊಡೆದಾಟ.. ಗಂಟೆ ಶಬ್ದ.. ಹೀಗೆ 1 ನಿಮಿಷ 15 ಸೆಕೆಂಡ್ನ ಟೀಸರ್ನಲ್ಲಿ ಕೆಲವೊಂದಿಷ್ಟು ಅಂಶಗಳನ್ನು ಮಿಶ್ರಣ ಮಾಡಿ ‘ಪಾಪ್ಕಾರ್ನ್ ಮಂಕಿ ಟೈಗರ್’ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ದುನಿಯಾ ಸೂರಿ.
ಶೀರ್ಷಿಕೆ ಮೂಲಕವೇ ಹೆಚ್ಚು ಸದ್ದು ಮಾಡಿದ್ದ ‘ಪಾಪ್ಕಾರ್ನ್ ಮಂಕಿ ಟೈಗರ್’, ಫಸ್ಟ್ ಲುಕ್ ಬಿಡುಗಡೆ ಬಳಿಕ ಚಿತ್ರದ ಮೇಲಿನ ನಿರೀಕ್ಷೆಗೆ ಮತ್ತಷ್ಟು ಒಗ್ಗರಣೆ ಹಾಕಿತ್ತು. ಈಗ ಟೀಸರ್ ಹೊರಬಂದಿದೆ. ಸೂರಿಯ ಟಿಪಿಕಲ್ ರಾ ಕಂಟೆಂಟ್ ಘಮ ಎಂದಿನಂತೆ ‘ಪಾಪ್ಕಾರ್ನ್..’ನಲ್ಲೂ ಮುಂದುವರಿದಿದೆ. ಟೀಸರ್ ಮೂಲಕ ಚಿತ್ರದಲ್ಲೇನಿದೆ ಎಂಬ ಗುಟ್ಟನ್ನು ಬಿಟ್ಟುಕೊಡದ ಸೂರಿ, ಕುತೂಹಲ ಮೂಡಿಸುವ ಕೆಲಸ ಮಾಡಿದ್ದಾರೆ.
ಒಂದೇ ಒಂದು ಡೈಲಾಗ್ ಇಲ್ಲದ ಟೀಸರ್ನಲ್ಲಿ ಹಿನ್ನೆಲೆ ಧ್ವನಿಯೇ ವಿಚಿತ್ರ ಮತ್ತು ವಿಶಿಷ್ಟ ಅನಿಸುವಂತಿದೆ. ‘ಟಗರು’ ಚಿತ್ರದಲ್ಲಿ ಸಂಗೀತದ ಮೂಲಕವೇ ಕಮಾಲ್ ಮಾಡಿದ್ದ ಚರಣ್ರಾಜ್, ಇಲ್ಲಿಯೂ ಹೈಲೈಟ್ ಆಗಿದ್ದಾರೆ. ಛಾಯಾಗ್ರಾಹಕ ಎಸ್.ಶೇಖರ್ ಅವರ ಕ್ಯಾಮರಾ, ಪ್ರತಿ ದೃಶ್ಯವನ್ನು ಫೋಟೋಫ್ರೇಮ್ ಎಂಬಂತೆ ಸೆರೆ ಹಿಡಿದಿದೆ. ‘ಟಗರು’ ಸಿನಿಮಾ ಬಳಿಕ ನಿರ್ದೇಶಕ ಸೂರಿ ಜತೆ ಧನಂಜಯ ಮತ್ತೆ ಸೇರಿಕೊಂಡಿದ್ದಾರೆ.
ಸದ್ಯ ಹೊರಬಂದಿರುವ ಟೀಸರ್ನಲ್ಲಿ ಒಟ್ಟು ಮೂರು ಶೇಡ್ಗಳಲ್ಲಿ ಡಾಲಿಯ ದರ್ಶನವಾಗಿದೆ. ಶೂಟಿಂಗ್ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವ ‘ಪಾಪ್ಕಾರ್ನ್..’ ಚಿತ್ರ ಶೀಘ್ರದಲ್ಲಿ ತೆರೆಮೇಲೆ ಬರುವ ಮುನ್ಸೂಚನೆ ಸಿಕ್ಕಿದ್ದು, ನಿವೇದಿತಾ, ಅಮೃತಾ ಅಯ್ಯಂಗಾರ್, ಸಪ್ತಮಿ, ಸುಧೀ, ನವೀನ್ ಸೇರಿ ಹಲವರು ಪಾತ್ರವರ್ಗದಲ್ಲಿದ್ದಾರೆ. ಕೆ.ಎಂ.ಸುಧೀರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.