ವಿಜಯಾನಂದ ಫಸ್ಟ್​ಲುಕ್ ಬಿಡುಗಡೆ; ಡಾ. ವಿಜಯ ಸಂಕೇಶ್ವರ ಅವರ ರೋಚಕ ಕಥೆ ಈಗ ಬಯೋಪಿಕ್

Ullasa
Published on

ಬೆಂಗಳೂರು: ಲಾಜಿಸ್ಟಿಕ್ ಮತ್ತು ಮಾಧ್ಯಮ ಲೋಕದಲ್ಲಿ ಮುಂಚೂಣಿಯಲ್ಲಿರುವ ವಿಆರ್​ಎಲ್ ಸಂಸ್ಥೆ, ಚಿತ್ರ ನಿರ್ಮಾಣ ಕ್ಷೇತ್ರಕ್ಕೂ ಧುಮುಕಿದೆ. ‘ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್’ ಎಂಬ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ, ಅದರಲ್ಲಿ ‘ವಿಜಯಾನಂದ’ ಶೀರ್ಷಿಕೆಯ ಸಿನಿಮಾ ಘೋಷಣೆ ಮಾಡಿದೆ. ಶೀರ್ಷಿಕೆಯೇ ಹೇಳುವಂತೆ ಚೊಚ್ಚಲ ಚಿತ್ರವಾಗಿ ಸಂಸ್ಥೆಯ ಚೇರ್ಮನ್, ಪದ್ಮಶ್ರೀ ಪುರಸ್ಕ್ರತ ಡಾ. ವಿಜಯ ಸಂಕೇಶ್ವರ ಅವರ ಜೀವನ ತೆರೆಮೇಲೆ ಮೂಡಿಬರಲಿದೆ. ಸೋಮವಾರ (ಆಗಸ್ಟ್ 2) ವಿಜಯ ಸಂಕೇಶ್ವರ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಅವರು ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

1976ರಲ್ಲಿ ಕೇವಲ ಒಂದು ಟ್ರಕ್​ನಿಂದ ಆರಂಭವಾದ ವಿಜಯ ಸಂಕೇಶ್ವರ ಅವರ ‘ವಿಆರ್​ಎಲ್’ ಪ್ರಯಾಣ, ಇದೀಗ ಭಾರತದಲ್ಲಿಯೇ ಅತಿ ದೊಡ್ಡ ಲಾಜಿಸ್ಟಿಕ್ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ಎಲ್ಲ ಸಾಧನೆಯ ಹಿಂದಿನ ರೋಚಕ ಕಥೆಯನ್ನು ಕಮರ್ಷಿಯಲ್ ಕೋನದಲ್ಲಿ ಬಯೋಪಿಕ್ ಮಾಡುವ ಕಾರ್ಯ ನಡೆಯುತ್ತಿದೆ. ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಮತ್ತು ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ‘ವಿಜಯಾನಂದ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡದ ನಂ1 ದಿನಪತ್ರಿಕೆ ‘ವಿಜಯವಾಣಿ’ ಮತ್ತು ಜನಪ್ರಿಯ ಸುದ್ದಿವಾಹಿನಿ ‘ದಿಗ್ವಿಜಯ’ ಮೂಲಕ ಮಾಧ್ಯಮ ರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಆನಂದ ಸಂಕೇಶ್ವರ ಅವರು ಚಿತ್ರ ನಿರ್ಮಾಣದ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿರುವುದು ವಿಶೇಷ.

ಇನ್ನು ಈ ಚಿತ್ರದ ನಿರ್ದೇಶಕರು ಯಾರು? ನಾಯಕನ ಪಾತ್ರ ಮಾಡುವವರು ಯಾರು? ಈ ಪ್ರಶ್ನೆಗೂ ಉತ್ತರವಿದೆ. ಕಳೆದ ಎಂಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಮತ್ತು ‘ಟ್ರಂಕ್’ ಸಿನಿಮಾ ನಿರ್ದೇಶಿಸಿದ ರಿಶಿಕಾ ಶರ್ಮ ಈ ಬಯೋಪಿಕ್​ನ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ‘ವಿಜಯಾನಂದ’ ಚಿತ್ರದಲ್ಲಿ ವಿಜಯ ಸಂಕೇಶ್ವರ ಅವರ ಪಾತ್ರಕ್ಕೆ ಉತ್ತರ ಕರ್ನಾಟಕದ ಪ್ರತಿಭೆ ನಿಹಾಲ್ ರಜಪೂತ್ ಬಣ್ಣ ಹಚ್ಚಲಿದ್ದಾರೆ. ರಿಶಿಕಾ ನಿರ್ದೇಶನದ ‘ಟ್ರಂಕ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿಹಾಲ್, ಈ ಹಿಂದೆ ‘ಚೌಕ’ ಸಿನಿಮಾದಲ್ಲಿಯೂ ನಟಿಸಿದ್ದರು. ರಂಗಭೂಮಿಯಲ್ಲಿಯೂ ಗುರುತಿಸಿಕೊಂಡು ‘ಭಾರತಿ’, ‘ಗಂಗಾ’ ಧಾರಾವಾಹಿಗಳಲ್ಲಿಯೂ ನಟಿಸಿದ್ದರು. ಆಂಕರ್ ಆಗಿಯೂ ನಿಹಾಲ್ ಕೆಲಸ ಮಾಡಿದ್ದಾರೆ.

ಪಳಗಿದ ತಾಂತ್ರಿಕ ವರ್ಗ

‘ವಿಜಯಾನಂದ’ ಚಿತ್ರದ ಸಲುವಾಗಿ ಕಳೆದ ಕಳೆದ ಕೆಲವು ತಿಂಗಳಿಂದ ಸಿದ್ಧತೆಗಳು ನಡೆಯುತ್ತ ಬಂದಿವೆ. ತಾಂತ್ರಿಕ ಬಳಗದಲ್ಲಿಯೂ ಪಳಗಿದ ತಂಡವೇ ಜತೆಯಾಗಿದೆ. ಮಲಯಾಳಂ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ತೆಲುಗಿನಲ್ಲಿ ಕೆಲಸ ಮಾಡಿದ ಅನುಭವ ಇರುವ ಗೋಪಿ ಸುಂದರ್ ಈ ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ‘ಕಡಲ ತೀರದ ಭಾರ್ಗವ’ ಮತ್ತು ‘ಮಹಿರಾ’ ಖ್ಯಾತಿಯ ಕೀರ್ತನ್ ಪೂಜಾರಿ ಛಾಯಾಗ್ರಹಣ, ಸಂಕಲನಕಾರರಾಗಿ ಹೇಮಂತ್ ಕುಮಾರ್ ಡಿ, ನೃತ್ಯ ನಿರ್ದೇಶಕ ಇರ್ವನ್ ಸರ್ದಾರಿಯಾ, ಕಲಾ ಎಕ್ಸಿಕ್ಯೂಷನ್ ವಸಂತ್ ಕುಲಕರ್ಣಿ, ರಘು ನಿಡುವಳ್ಳಿ ಸಂಭಾಷಣೆ ಜವಾಬ್ದಾರಿ ಹೊತ್ತಿದ್ದಾರೆ. ಸೆಪ್ಟೆಂಬರ್​ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು 2022ಕ್ಕೆ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net