ಜೇಮ್ಸ್​ನಲ್ಲಿ ಅಣ್ಣಾವ್ರ ಮಕ್ಕಳು: ಪುನೀತ್ ಚಿತ್ರದಲ್ಲಿ ಶಿವಣ್ಣ, ರಾಘಣ್ಣಗೆ ಅತಿಥಿ ಪಾತ್ರ

Puneeth
Published on

ಬೆಂಗಳೂರು: ಅಣ್ಣಾವ್ರ ಮಕ್ಕಳು ಒಟ್ಟಿಗೆ ಒಂದೇ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂಬ ಕೊರಗು, ಡಾ. ರಾಜಕುಮಾರ್ ಅವರ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಹಲವು ವರ್ಷಗಳ ಹಿಂದೆ ಮೂವರನ್ನು ಸೇರಿಸಿ ಒಂದು ಚಿತ್ರ ಮಾಡುವುದಾಗಿ ನಿರ್ದೇಶಕ ರವಿ ಶ್ರೀವತ್ಸ ಘೋಷಿಸಿದರೂ, ಆ ಚಿತ್ರ ಕಾರಣಾಂತರಗಳಿಂದ ಶುರುವಾಗಲಿಲ್ಲ. ಆ ನಂತರ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಒಟ್ಟಿಗೆ ನಟಿಸುವುದಕ್ಕೆ ಸಾಧ್ಯವಾಗಲೇ ಇಲ್ಲ.

ಮೂವರೂ ಒಟ್ಟಿಗೆ ತೆರೆ ಹಂಚಿಕೊಳ್ಳುವುದಕ್ಕೆ ಸಾಧ್ಯವಾಗದಿದ್ದರೂ, ಈಗ ಮೂವರನ್ನೂ ಒಂದೇ ಚಿತ್ರದಲ್ಲಿ ನೋಡಬಹು ದಾಗಿದೆ. ಪುನೀತ್ ಅಭಿನಯದ ‘ಜೇಮ್್ಸ’ ಚಿತ್ರತಂಡಕ್ಕೆ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಹೊಸದಾಗಿ ಸೇರ್ಪಡೆಯಾಗಿದ್ದು, ಇಬ್ಬರೂ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಅವರಿಬ್ಬರ ಪಾತ್ರಗಳೇನು ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಹಾಗೆಯೇ ಇಬ್ಬರೂ ತೆರೆಯ ಮೇಲೆ ಎಷ್ಟು ಹೊತ್ತು ಕಾಣಿಸಿಕೊಳ್ಳುತ್ತಾರೆ ಎಂಬ ವಿಷಯವನ್ನೂ ಬಹಿರಂಗ ಮಾಡಿಲ್ಲ. ಮೂಲಗಳ ಪ್ರಕಾರ, ಇಬ್ಬರೂ ಚಿತ್ರದಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳುತ್ತಿದ್ದು, ಶುಕ್ರವಾರ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರಂತೆ.

ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬಕ್ಕೆ (ಮಾರ್ಚ್ 17) ‘ಜೇಮ್ಸ್’ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇನ್ನು, ಪುನೀತ್ ಪಾತ್ರಕ್ಕೆ ಅವರದ್ದೇ ಧ್ವನಿಯನ್ನು ಬಳಸಿಕೊಳ್ಳಲಾಗುತ್ತದಾ ಅಥವಾ ಬೇರೆಯವರಿಂದ ಡಬ್ಬಿಂಗ್ ಮಾಡಿಸಲಾಗುತ್ತದಾ ಎಂಬ ವಿಷಯದ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net