

ಡಾ. ರಾಜಕುಮಾರ್ ತಮ್ಮ ಚಿತ್ರಜೀವನದಲ್ಲಿ ಹಲವು ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ಆದರೆ, ಅವರನ್ನು ಜನ ಅತೀ ಹೆಚ್ಚು ಇಷ್ಟಪಡುವುದು ಭಕ್ತಿಪ್ರಧಾನ ಚಿತ್ರಗಳಿಗೆ ಎಂಬುದರಲ್ಲಿ ಎರಡು ಮಾತಿಲ್ಲ. ಡಾ. ರಾಜಕುಮಾರ್ ಅವರನ್ನು ಭಕ್ತಿಪರವಶರಾಗಿ ನೋಡುವುದೇ ಒಂದು ಚೆಂದ. ಅದಕ್ಕೆ ಪೂರಕವಾಗಿ ರಾಜಕುಮಾರ್ ಹಲವು ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ಪ್ರತಿಭೆಯ ಅನಾವರಣ ಮಾಡಿದ್ದಾರೆ. ರಾಜಕುಮಾರ್ ಅವರ ಭಕ್ತಿಯ ಪರಾಕಾಷ್ಠೆ, ಅವರ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ದಲ್ಲೇ ಪ್ರೇಕ್ಷಕರಿಗೆ ನೋಡುವುದಕ್ಕೆ ಸಿಕ್ಕಿತು. ಶಿವನಿಗಾಗಿ ತನ್ನ ಕಣ್ಣನ್ನೇ ಕಿತ್ತು ಕೊಡುವ ಕಣ್ಣಪ್ಪನ ಪಾತ್ರವನ್ನು ರಾಜ್ ಮೊದಲ ಚಿತ್ರದಲ್ಲೇ ಅದ್ಭುತವಾಗಿ ಅಭಿವ್ಯಕ್ತಿಗೊಳಿಸಿದ್ದರು. ಆ ನಂತರ ಅವರು ಹಲವು ಚಿತ್ರಗಳಲ್ಲಿ ಭಕ್ತಿಯ ಪರಾಕಾಷ್ಠೆಯನ್ನು ತಮ್ಮ ಚಿತ್ರಗಳ ಮೂಲಕ ಹಿಡಿದಿಟ್ಟಿದ್ದಾರೆ. ‘ಭಕ್ತ ಕನಕದಾಸ’,
‘ಭಕ್ತ ಕುಂಬಾರ’, ‘ಹರಿಭಕ್ತ’, ‘ಸಂತ ತುಕಾರಾಂ’, ‘ಮಹಾತ್ಮ ಕಬೀರ್’, ‘ಮಂತ್ರಾಲಯ ಮಹಾತ್ಮೆ’, ‘ನವಕೋಟಿ ನಾರಾಯಣ’, ‘ಕೈವಾರ ಮಹಾತ್ಮೆ’, ‘ಹರಿ ಭಕ್ತ’, ‘ಭಕ್ತ ವಿಜಯ’, ‘ಭಕ್ತ ಚೇತ’ ಮುಂತಾದ ಹಲವು ಭಕ್ತಿ ಪ್ರಧಾನ ಚಿತ್ರಗಳಲ್ಲಿ, ತಾವೆಂತಹ ನಟ ಎಂದು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರಗಳ ಮೂಲಕ ಕಬೀರ್ ದಾಸ್, ಪುರಂದರ ದಾಸರು, ಕನಕದಾಸರು, ಶ್ರೀ ರಾಘವೇಂದ್ರ ಸ್ವಾಮಿಗಳು ಸೇರಿದಂತೆ ಈ ನಾಡಿನ ಹಲವು ಪುಣ್ಯಪುರುಷರ ಜೀವನವನ್ನು ತೆರೆಯ ಮೇಲೆ ಸಮರ್ಥವಾಗಿ ಹಿಡಿದಿಟ್ಟಿದ್ದಾರೆ. ಇಡೀ ಭಾರತೀಯ ಚಿತ್ರರಂಗದಲ್ಲೇ ರಾಜಕುಮಾರ್ ಅವರನ್ನು ಹೊರತುಪಡಿಸಿದರೆ, ಬೇರ್ಯಾವ ನಟ ಸಹ ಇಷ್ಟೊಂದು ಸಂಖ್ಯೆಯ ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಟಿಸಿಲ್ಲ ಎಂಬುದು ವಿಶೇಷ.