ಪ್ಯಾನ್ ಇಂಡಿಯಾ ಸ್ಟಾರ್ ಡಾ.ರಾಜ್ : ಸಪ್ತ ಭಾಷೆಗಳಲ್ಲಿ ಡಬ್ ಆಗಿ ದಾಖಲೆ ಬರೆದಿತ್ತು ‘ಮಹಿಷಾಸುರ ಮರ್ದಿನಿ’ ಚಿತ್ರ

pan india
Published on

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಸದ್ಯ ಪ್ಯಾನ್ ಇಂಡಿಯಾ ಪರಿಕಲ್ಪನೆ ಟ್ರೆಂಡಿಂಗ್‌ನಲ್ಲಿದೆ. ಸ್ಟಾರ್ ನಟ ಸಿನಿಮಾವಾಗಿರಲಿ ಅಥವಾ ಸಣ್ಣ ಬಜೆಟ್ ಚಿತ್ರವಾಗಿರಲಿ ಪ್ಯಾನ್ ಇಂಡಿಯಾ ತೆರೆ ಮೇಲೆ ತರಲು ಮುಂದಾಗುತ್ತಿದ್ದಾರೆ. ಐದಾರು ಭಾಷೆಗಳಲ್ಲಿ ಚಿತ್ರ ಬಿಡುಗಡೆ ಮಾಡಿದರೆ ಹೆಚ್ಚು ಪ್ರಸಿದ್ಧಿಯಾಗಿ, ಗಳಿಕೆ ಕೂಡ ಹೆಚ್ಚು ಮಾಡಬಹುದು ಎಂಬುದು ಅನಿಸಿಕೆ. ಅಷ್ಟಕ್ಕೂ, ಈ ಪ್ಯಾನ್ ಇಂಡಿಯಾ ಪರಿಕಲ್ಪನೆ ತೀರಾ ಇತ್ತೀಚಿನ ಟ್ರೆಂಡ್ ಎಂಬಂತೆ ಕೆಲವರು ನಂಬಿದ್ದಾರೆ. 2015ರಲ್ಲಿ ತೆರೆಕಂಡಿದ್ದ ಎಸ್.ಎಸ್.ರಾಜಮೌಳಿ ನಿರ್ದೇಶನದ ತೆಲುಗಿನ ‘ಬಾಹುಬಲಿ: ದ ಬಿಗಿನಿಂಗ್’ ಬಳಿಕ ಈ ಪ್ಯಾನ್ ಇಂಡಿಯಾ ಚಿತ್ರಗಳು ಹೆಚ್ಚಾಗಿದ್ದು ಎಂದು ಉತ್ತರ ಬರುವುದು ಸಹಜ. ಆದರೆ, ಇದು ತಪ್ಪು. ಯಾಕೆಂದರೆ, 66 ವರ್ಷಗಳ ಹಿಂದೆ ಅರ್ಥಾತ್ 1959ರಲ್ಲಿಯೇ ಕನ್ನಡದ ಚಿತ್ರವೊಂದು ಏಳು ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ತೆರೆಕಂಡಿತ್ತು. ಅಂದಹಾಗೆ, ಈ ಟ್ರೆಂಡ್‌ಗೆ ಓಂಕಾರ ಹಾಕಿದ್ದು ಕೂಡ ಅಣ್ಣಾವ್ರ ಚಿತ್ರ ಎನ್ನುವುದು ಗಮನಾರ್ಹ ಸಂಗತಿ. 1959ರಲ್ಲಿ ಬಿಡುಗಡೆಯಾಗಿದ್ದ ರಾಜಕುಮಾರ್ ನಟಿಸಿದ್ದ ಪೌರಾಣಿಕ ಸಿನಿಮಾ ‘ಮಹಿಷಾಸುರ ಮರ್ದಿನಿ’ ಚಿತ್ರವು ಏಳು ಭಾಷೆಗಳಲ್ಲಿ ಡಬ್ ಆಗಿತ್ತು. ಹೀಗಾಗಿ, ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರಕ್ಕೆ ಸಲ್ಲುತ್ತದೆ. ನಿರ್ದೇಶಕ ಬಿ.ಎಸ್.ರಂಗ ಆ್ಯಕ್ಷನ್-ಕಟ್ ಹೇಳಿದ್ದ ಈ ಪೌರಾಣಿಕ ಚಿತ್ರದಲ್ಲಿ ಡಾ. ರಾಜಕುಮಾರ್, ಮಹಿಷಾಸುರನ ಪಾತ್ರದಲ್ಲಿ ನಟಿಸಿದ್ದರು. ಸಾಹುಕಾರ್ ಜಾನಕಿ, ವಿ.ನಾಗಯ್ಯ, ಕೆ.ಎಸ್.ಅಶ್ವತ್ಥ, ಉದಯ ಕುಮಾರ್, ನರಸಿಂಹರಾಜು ಸೇರಿ ಘಟಾನುಘಟಿ ಕಲಾವಿದರ ದಂಡೇ ಈ ಚಿತ್ರದಲ್ಲಿತ್ತು.

ಏಳು ಭಾಷೆಗಳಲ್ಲಿ ಸಿನಿಮಾ: ಕನ್ನಡದ ‘ಮಹಿಷಾಸುರ ಮರ್ದಿನಿ’ ಚಿತ್ರವು ತೆಲುಗು, ತಮಿಳು, ಮಲಯಾಳಂನಲ್ಲಿ ಇದೇ ಹೆಸರಿನಲ್ಲಿ ಡಬ್ ಆಗಿ ಬಿಡುಗಡೆಯಾಗಿತ್ತು. ಆದರೆ, ಹಿಂದಿಯಲ್ಲಿ ‘ದುರ್ಗಾ ಮಾತಾ’ ಎಂಬ ಟೈಟಲ್‌ನಲ್ಲಿ 1960ರಲ್ಲಿ ರಿಲೀಸ್ ಮಾಡಲಾಗಿತ್ತು. ಮದ್ರಾಸ್‌ನ ವಿಕ್ರಮ್ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ ಕೂಡ ಈ ಚಿತ್ರಕ್ಕೆ ಸಲ್ಲುತ್ತದೆ.

ಬಿ.ಎಸ್.ರಂಗರ ಮೊದಲ ಕನ್ನಡ ಚಿತ್ರ: ನಿರ್ದೇಶಕ ಬಿ.ಎಸ್.ರಂಗ ಅವರ ಪೂರ್ಣ ಹೆಸರು ಬಿಂಡಿಗನವಿಲೆ ಶ್ರೀನಿವಾಸ್ ಅಯ್ಯಂಗಾರ್ ರಂಗ ಎಂದು. ಅಂದಿನ ಮೈಸೂರು ರಾಜ್ಯದ ಮಾಗಡಿ ಮೂಲದವರು. ‘ಮಹಿಷಾಸುರ ಮರ್ದಿನಿ’ ಅವರ ನಿರ್ದೇಶನದ ಮೊದಲ ಕನ್ನಡ ಸಿನಿಮಾ. ನಿರ್ದೇಶನದ ಜತೆಗೆ ನಿರ್ಮಾಣ ಹಾಗೂ ಛಾಯಾಗ್ರಹಣದ ಹೊಣೆ ಕೂಡ ಅವರೇ ಹೊತ್ತಿದ್ದರು. ಈ ಮೊದಲು ಬಿ.ಎಸ್.ರಂಗ ಅವರು ಹಿಂದಿಯ ‘ಪರ್ದೇಸಿ’, ‘ಪ್ಯಾಸ್’, ‘ಭಕ್ತ ತುಳಸಿದಾಸ’ ಸೇರಿ ತೆಲುಗು, ತಮಿಳಿನಲ್ಲಿ 15ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶಿಸಿದ್ದರು. ‘ಮಹಿಷಾಸುರ ಮರ್ದಿನಿ’ ಮೂಲಕ ಕನ್ನಡಕ್ಕೆ ಬಂದರು. ಬಳಿಕ ಕನ್ನಡದ ಮೊದಲ ವರ್ಣಚಿತ್ರ ‘ಅಮರಶಿಲ್ಪಿ ಜಕಣಾಚಾರಿ’ ಜತೆಗೆ ‘ಪ್ರತಿಜ್ಞೆ’, ‘ಮಿಸ್ಟರ್ ರಾಜಕುಮಾರ್’ ಸೇರಿ ಹಲವು ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು.

ಅಣ್ಣಾವ್ರ ಹಾಡಿದ ಮೊದಲ ಸಿನಿಮಾ: ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ್ ಅವರು ನಟನೆ ಜತೆಗೆ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ನಟನೆ (ಬೇಡರ ಕಣ್ಣಪ್ಪ - 1954) ಮತ್ತು ಗಾಯನ (‘ನಾದಮಯ ಈ ಲೋಕವೆಲ್ಲ’ ಹಾಡು, ‘ಜೀವನಚೈತ್ರ’ - 1972) ಎರಡೂ ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ಕಲಾವಿದ ಎಂಬ ದಾಖಲೆ ಇಂದಿಗೂ ಅವರ ಹೆಸರಿನಲ್ಲಿದೆ. ಕನ್ನಡದ 300ಕ್ಕೂ ಅಧಿಕ ಚಲನಚಿತ್ರ ಗೀತೆಗಳು, 200 ಭಕ್ತಿಗೀತೆಗಳಿಗೆ ಅವರು ಧ್ವನಿಯಾಗಿದ್ದಾರೆ. ಇಂತಹ ಅಣ್ಣಾವ್ರ ಮೊದಲ ಬಾರಿ ಸಿನಿಮಾಗೆ ಹಾಡಿದ್ದು, ಇದೇ ಚಿತ್ರದಲ್ಲಿ. ‘ತುಂಬಿತು ಮನವ’ ಎಂದು ಸಾಗುವ ಚಿ.ಸದಾಶಿವಯ್ಯ ರಚಿಸಿದ್ದ ಈ ಹಾಡನ್ನು ರಾಜಕುಮಾರ್ ಹಾಗೂ ಎಸ್.ಜಾನಕಿ ಜತೆಯಾಗಿ ಹಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net