

ಡಾ. ರಾಜಕುಮಾರ್ ಕುಟುಂಬದ ವಜ್ರೇಶ್ವರಿ ಕಂಬೈನ್ಸ್, ಪೂರ್ಣಿಮಾ ಎಂಟರ್ಪ್ರೖೆಸಸ್ ಸೇರಿ ಹಲವು ಸಂಸ್ಥೆಗಳಿಂದ ಸಾಕಷ್ಟು ಚಿತ್ರಗಳು ಇದುವರೆಗೂ ನಿರ್ಮಾಣವಾಗಿವೆ. ಆ ಚಿತ್ರಗಳೆಲ್ಲ ಪಾರ್ವತಮ್ಮ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮುಂತಾದವರ ಹೆಸರಲ್ಲಿ ನಿರ್ಮಾಣವಾಗಿವೆ ಹೊರತು, ಯಾವ ಚಿತ್ರ ಸಹ ರಾಜಕುಮಾರ್ ಅವರ ಹೆಸರಲ್ಲಿ ನಿರ್ವಣವಾಗಿಲ್ಲ. ಅದರ ಹೊರತಾಗಿಯೂ, ಒಂದೇ ಒಂದು ಚಿತ್ರದ ಟೈಟಲ್ ಕಾರ್ಡ್ನಲ್ಲಿ ನಿರ್ಮಾಪಕರ ಪಟ್ಟಿಯಲ್ಲಿ ರಾಜಕುಮಾರ್ ಅವರ ಹೆಸರು ಇದೆ. ಇಷ್ಟಕ್ಕೂ ರಾಜಕುಮಾರ್ ಅವರು ನಿರ್ವಪಕರಾಗುವುದಕ್ಕೆ ಪ್ರೇರೇಪಿಸಿದ ಸಂಗತಿಯೇನು? ಅಲ್ಲೇ ಇರುವುದು ಸ್ವಾರಸ್ಯ.
1950ರ ದಶಕದ ಕೊನೆಯಲ್ಲಿ ‘ಜಗಜ್ಯೋತಿ ಬಸವೇಶ್ವರ’ ಚಿತ್ರದ ಚಿತ್ರೀಕರಣ ಪ್ರಾರಂಭವಾಯಿತಂತೆ. ಅರ್ಧ ಚಿತ್ರೀಕರಣ ಮುಗಿಯುವಷ್ಟರಲ್ಲಿ, ಹಣಕಾಸಿನ ಮುಗ್ಗಟ್ಟಿನಿಂದ ಚಿತ್ರ ನಿಂತು ಹೋಗಿದೆ. ಬೇರೇನೂ ಕೆಲಸವಿಲ್ಲದಿದ್ದ ಕಲಾವಿದರೆಲ್ಲ ನಿತ್ಯ ನಿರ್ಮಾಪಕ ವಿಶ್ವನಾಥ ಶೆಟ್ಟರ ವಿಶ್ವಕಲಾ ಚಿತ್ರ ಆಫೀಸಿನಲ್ಲಿ ಭೇಟಿ ಮಾಡುತ್ತಿದ್ದರಂತೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಒಂದಿಷ್ಟು ಹರಟೆ ಹೊಡೆದು, ಮನೆಗೆ ಹೋಗುತ್ತಿದ್ದರಂತೆ. ಹೀಗೆ ಒಮ್ಮೆ ರಾಜಕುಮಾರ್, ಜಿ.ವಿ. ಅಯ್ಯರ್, ಟಿ.ಎನ್. ಬಾಲಕೃಷ್ಣ, ನರಸಿಂಹರಾಜು ಮುಂತಾದವರು ಸೇರಿದ್ದ ಸಮಯದಲ್ಲಿ, ಮುಂದೇನು ಎಂಬ ಚರ್ಚೆ ಆಗುತ್ತಿತ್ತಂತೆ. ಹೀಗೆ ಕೆಲಸವಿಲ್ಲದೆ ಕೂತಿದ್ದರೆ, ಸಂಸಾರ ನಡೆಸುವುದು ಹೇಗೆ ಎಂಬ ಪ್ರಶ್ನೆ ಅವರೆಲ್ಲರಿಗೂ ಬಂದಿದೆ.
ಹೇಗಿದ್ದರೂ ಎಲ್ಲರೂ ರಂಗಭೂಮಿಯ ಹಿನ್ನೆಲೆಯವರಾದ್ದರಿಂದ, ಯಾಕೆ ನಾಟಕಗಳನ್ನು ಮಾಡಿಕೊಂಡಿರಬಾರದು ಎಂದು ಚರ್ಚೆಯಾಯಿತಂತೆ. ಕನ್ನಡದ 30ಕ್ಕೂ ಹೆಚ್ಚು ಕಲಾವಿದರು ಹೊಟ್ಟೆ ಹಸಿದುಕೊಂಡು ಕುಳಿತಿರುವುದರಿಂದ ಹೊಸ ಸಿನಿಮಾಗಳು ಸಿಗುವವರೆಗೂ ಒಂದಿಷ್ಟು ಜನರಿಗೆ ಕೆಲಸ ಸಿಕ್ಕಿದಂತೆ ಆಗುತ್ತದೆ ಎಂಬ ಕಾರಣಕ್ಕೆ ನಾಟಕಗಳನ್ನು ಮಾಡುವುದಕ್ಕೆ ಅಂದು ತೀರ್ಮಾನಿಸಲಾಯಿತು. ಇದಕ್ಕೆ ಎಲ್ಲರಿಂದ ಅನುಮೋದನೆ ಸಿಕ್ಕು, ಆಗ ಹುಟ್ಟಿಕೊಂಡಿದ್ದೇ ‘ಕನ್ನಡ ಚಲನಚಿತ್ರ ಕಲಾವಿದರ ಸಂಘ’. ಅದಕ್ಕೆ ಮಾಲೀಕರಾಗಿ ರಾಜಕುಮಾರ್, ಜಿ.ವಿ. ಅಯ್ಯರ್, ನರಸಿಂಹರಾಜು ಮತ್ತು ಬಾಲಕೃಷ್ಣ ನೇತೃತ್ವವಹಿಸಿಕೊಂಡಿದ್ದಾರೆ.
ಸಂಸ್ಥೆ ಪ್ರಾರಂಭವಾಗಿ, ನಾಟಕಗಳ ಅಭ್ಯಾಸ ಶುರುವಾಗಿ, ಮೈಸೂರಿನ ಟೌನ್ಹಾಲ್ನಿಂದ ಕ್ಯಾಂಪ್ ಶುರುವಾಯಿತಂತೆ. ಆದರೆ, ಅದ್ಯಾಕೋ ಮೊದಲ ಮೂರು ಕ್ಯಾಂಪ್ನಲ್ಲಿ ಹೆಚ್ಚು ಹಣವೇ ಬರಲಿಲ್ಲವಂತೆ. ಒಂದು ಹಂತದಲ್ಲಿ ಕೈಯಲ್ಲಿದ್ದ ಹಣವೂ ಖರ್ಚಾಗುವ ಹಂತ ಬಂತಂತೆ. ಕ್ರಮೇಣ ಉತ್ತರ ಕರ್ನಾಟಕದತ್ತ ಪ್ರಯಾಣ ಬೆಳೆಸಿದ ಕನ್ನಡ ಕಲಾವಿದರು, ಅಲ್ಲಿ ಜನಪ್ರಿಯತೆ, ಹಣ, ಯಶಸ್ಸು ಕಂಡರಂತೆ. ಹೀಗೆ ಕರ್ನಾಟಕದ ಒಂದು ಸುತ್ತು ಬರುತ್ತಿದ್ದಂತೆ, ಸಂಘದ ಬಳಿ ಮೂರು ಲಕ್ಷ ರೂ.ಗಳು ಜಮೆಯಾಗಿತ್ತಂತೆ. 57 ರೂಪಾಯಿಗಳಿಂದ ಪ್ರಾರಂಭವಾದ ಸಂಸ್ಥೆಯು, ಕೆಲವೇ ತಿಂಗಳುಗಳ ಅಂತರದಲ್ಲಿ ಖರ್ಚು ಕಳೆದು ಮೂರು ಲಕ್ಷ ರೂ. ಸಂಗ್ರಹವಾಯಿತಂತೆ.
ಆ ಹಣವನ್ನು ನಾಲ್ವರು ತಲಾ 75 ಸಾವಿರದಂತೆ ಹಂಚಿಕೊಳ್ಳಬೇಕು ಎಂದು ತೀರ್ಮಾನವಾದಾಗ, ಪಾರ್ವತಮ್ಮ ರಾಜಕುಮಾರ್ ಮಧ್ಯ ಪ್ರವೇಶಸಿದರಂತೆ. ಇದು ಬರೀ ನಿಮ್ಮ ಹಣವಲ್ಲ, 30 ಜನರ ಬೆವರು ಇರುವುದರಿಂದ ಎಲ್ಲರಿಗೂ ಹಂಚಬೇಕು ಎಂದರಂತೆ. 30 ಜನರಿಗೆ ಹೇಗೆ ಕೊಡುವುದಕ್ಕೆ ಆಗುತ್ತದೆ ಎಂಬ ಪ್ರಶ್ನೆ ಬಂದಾಗ, ಈ ಹಣದಲ್ಲಿ ಒಂದು ಸಿನಿಮಾ ಮಾಡಿ, ಎಲ್ಲರಿಗೂ ಬದುಕು ಕೊಡಿ ಎಂದು ಸಲಹೆ ನೀಡಿದ್ದಾರೆ. ಎಲ್ಲರಿಗೂ ಪಾತ್ರ ಮತ್ತು ಅದಕ್ಕೆ ಸೂಕ್ತ ಸಂಭಾವನೆಯನ್ನು ಕೊಟ್ಟು, ಆ ಚಿತ್ರದಿಂದ ಬಂದ ಹಣವನ್ನು ನೀವು ಹಂಚಿಕೊಳ್ಳಿ ಎಂದು ಸಲಹೆ ನೀಡಿದರಂತೆ. ಅದರ ಪ್ರತಿಫಲವೇ ‘ರಣಧೀರ ಕಂಠೀರವ’.
ಎನ್.ಸಿ. ರಾಜನ್ ನಿರ್ದೇಶನದ ಈ ಚಿತ್ರದಲ್ಲಿ ಟೈಟಲ್ ಕಾರ್ಡ್ನಲ್ಲಿ ಕನ್ನಡ ಕಲಾವಿದರ ಕಾಣಿಕೆ ಎಂದು ನಮೂದಿಸಲಾಗಿದೆ. ಜತೆಗೆ, ನಿರ್ಮಾಪಕರ ಪಟ್ಟಿಯಲ್ಲಿ ರಾಜಕುಮಾರ್, ಜಿ.ವಿ. ಅಯ್ಯರ್, ನರಸಿಂಹರಾಜು ಮತ್ತು ಬಾಲಕೃಷ್ಣ ಅವರ ಹೆಸರುಗಳಿವೆ. ಈ ಚಿತ್ರದ ಯಶಸ್ಸಿನ ನಂತರ ಎಲ್ಲರಿಗೂ ಕ್ರಮೇಣ ಕೆಲಸ ಸಿಕ್ಕ ಹಿನ್ನೆಲೆಯಲ್ಲಿ, ಸಂಘದ ವತಿಯಿಂದ ಯಾವೊಂದು ಚಿತ್ರವನ್ನೂ ನಿರ್ವಿುಸಲಾಗಿಲ್ಲ. ಹೀಗೆ ಪ್ರಾರಂಭವಾದ ಸಂಘವು ನಂತರದ ವರ್ಷಗಳಲ್ಲಿ ಬೃಹದಾಕಾರವಾಗಿ ಬೆಳೆದು, ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸ್ವಂತ ಕಟ್ಟಡ ಸಹ ನಿರ್ಮಾಣವಾಗಿದೆ. ಆ ಕಟ್ಟಡಕ್ಕೆ ಡಾ. ರಾಜಕುಮಾರ್ ಭವನ ಎಂದು ಹೆಸರಿಡಲಾಗಿದೆ.