

ಬೆಂಗಳೂರು: ವರನಟ ಡಾ.ರಾಜಕುಮಾರ್ ಅವರು ನಟಿಸಿದ್ದ 220ಕ್ಕೂ ಅಧಿಕ ಸಿನಿಮಾಗಳಲ್ಲಿ ಎಲ್ಲ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಆ್ಯಕ್ಷನ್, ರೊಮ್ಯಾಂಟಿಕ್, ಸಸ್ಪೆನ್ಸ್ ಥ್ರಿಲ್ಲರ್, ಸ್ಪೈ... ಹೀಗೆ ಎಲ್ಲ ಜಾನರ್‌ಗಳಲ್ಲೂ ನಟಿಸಿರುವ ಅವರು, ರಾಜ, ಮಂತ್ರಿ, ದೇವರು, ಪೊಲೀಸ್, ಲಾಯರ್, ಗೂಢಚಾರಿ, ಕಳ್ಳ, ಕೃಷಿಕ, ಭಕ್ತ... ಹೀಗೆ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ. ಅಣ್ಣಾವ್ರ ನಾಯಕನಟನಾಗಿ ನಟಿಸಿದ ಮೊದಲ ಆರು ಸಿನಿಮಾಗಳು ಭಕ್ತಿ ಪ್ರಧಾನ ಸಿನಿಮಾಗಳಾಗಿದ್ದವು. ಆ ಕಾಲದಲ್ಲಿ ಭಕ್ತಿ ಪ್ರಧಾನ ಸಿನಿಮಾಗಳಿಗೆ ಹೆಚ್ಚು ಪ್ರೇಕ್ಷಕರಿದ್ದ ಕಾರಣ ಅದೇ ಶೈಲಿಯ ಚಿತ್ರಗಳು ಹೆಚ್ಚಾಗಿ ಬಂದವು. ರಾಜಕುಮಾರ್ ಅವರು ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ ‘ಬೇಡರ ಕಣ್ಣಪ್ಪ’ ಅನಂತರದ ‘ಸೋದರಿ’, ‘ಭಕ್ತ ವಿಜಯ’, ‘ಹರಿಭಕ್ತ’, ‘ಓಹಿಲೇಶ್ವರಿ’, ‘ಸತಿ ನಳಾಯಿನಿ’ ಸಿನಿಮಾಗಳು ಭಕ್ತಿ ಪ್ರಧಾನವಾಗಿದ್ದವು. ನಂತರ 1957ರಲ್ಲಿ ತೆರೆಕಂಡಿದ್ದ ‘ರಾಯರ ಸೊಸೆ’ ಚಿತ್ರವು ಡಾ.ರಾಜಕುಮಾರ್ ನಟಿಸಿದ ಮೊದಲ ಸಾಮಾಜಿಕ ಚಿತ್ರವಾಗಿದ್ದು, ಈ ಮೂಲಕ ಅವರ ವಿಭಿನ್ನ ಪಾತ್ರದ ನಟನೆಗೆ ಮುನ್ನುಡಿ ಬರೆಯಿತು. ‘ರಾಯರ ಸೊಸೆ’ ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ಸಮರ ಸಾರಿದ್ದ ಚಿತ್ರವಾಗಿತ್ತು. ಇಲ್ಲಿ ಅಣ್ಣಾವ್ರ ಡಾ.ಗೋವಿಂದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಐದು ಸಿನಿಮಾಗಳಲ್ಲಿ ಡಾ.ರಾಜ್ ಜತೆ ನಟಿಸಿದ್ದ ನಟಿ ಪಂಡರಿಬಾಯಿ ಈ ಚಿತ್ರದಲ್ಲೂ ಮುಂದುವರಿದಿದ್ದರು. ಪಂಡರಿಬಾಯಿ ‘ರಾಯರ ಸೊಸೆ’ ಚಿತ್ರಕ್ಕೆ ಬಂಡವಾಳ ಹಾಕುವ ಮೂಲಕ ನಿರ್ಮಾಪಕಿ ಪಟ್ಟ ಅಲಂಕರಿಸಿದ್ದರು. ಮರಾಠಿ ನಾಟಕವನ್ನು ಆಧರಿಸಿ, ಇದನ್ನು ಚಿತ್ರರೂಪಕ್ಕೆ ತರಲಾಗಿತ್ತು. ಮರಾಠಿ ನಾಟಕವನ್ನೇ ಪಿ.ಗುಂಡೂರಾವ್ ಕನ್ನಡದಲ್ಲಿ ಕಥೆಯಾಗಿಸಿದ್ದರು. ಈ ಸಿನಿಮಾವನ್ನು ಆರ್.ರಾಮಮೂರ್ತಿ ಹಾಗೂ ಕೆ.ಎಸ್.ಮೂರ್ತಿ ಜಂಟಿಯಾಗಿ ನಿರ್ದೇಶಿಸಿದ್ದರು. ‘ಓಹಿಲೇಶ್ವರಿ’ ಚಿತ್ರದ ಬಳಿಕ ಡಾ.ರಾಜಕುಮಾರ್ ಹಾಗೂ ಕಲ್ಯಾಣ್ ಕುಮಾರ್ ಎರಡನೇ ಬಾರಿಗೆ ಒಟ್ಟಿಗೆ ನಟಿಸಿದ್ದ ಚಿತ್ರವಿದು. ಮಾನ್ಯವತಿ, ಎಚ್.ರಾಮಚಂದ್ರ ಶಾಸಿ, ನರಸಿಂಹರಾಜು, ಬಾಲಕೃಷ್ಣ, ಎಂ.ಎನ್.ಲಕ್ಷ್ಮೀದೇವಿ ಕಲಾ ಬಳಗದಲ್ಲಿದ್ದರು.
ಸಂಚಲನ ಮೂಡಿಸಿದ್ದ ಸಿನಿಮಾ: ಎಲ್ಲ ಕಾಲದಿಂದಲೂ ವರದಕ್ಷಿಣೆ ಸಮಾಜಕ್ಕೆ ಪಿಡುಗು ಆಗಿ ಪರಿಣಮಿಸಿದೆ. ಇದನ್ನೇ ಆಧರಿಸಿ, ‘ರಾಯರ ಸೊಸೆ’ ಸಿನಿಮಾ ಮೂಡಿಬಂದಿತ್ತು. ಅರವಿಂದನದು (ಕಲ್ಯಾಣ ಕುಮಾರ್) ತುಂಬು ಕುಟುಂಬ. ಪತ್ನಿ ಲಕ್ಷ್ಮೀ (ಮೈನಾವತಿ), ತಂದೆ (ಎಚ್.ರಾಮಚಂದ್ರ ಶಾಸಿ) ಹಾಗೂ ತಾಯಿ ಗೌರಿ (ಜಯಶ್ರೀ) ಜತೆಗಿರುತ್ತಾನೆ. ಆದರೆ, ಅರವಿಂದನ ತಂದೆ ಧನದಾಹಿ. ಸೊಸೆ ಲಕ್ಷ್ಮೀ ವರದಕ್ಷಿಣೆ ತರಲು ಪೀಡಿಸುತ್ತಿರುತ್ತಾನೆ. ಕೊನೆಗೊಂದು ದಿನ ಆಕೆಯನ್ನು ಮನೆಯಿಂದ ಹೊರಹಾಕುತ್ತಾನೆ. ಆಗ ಅರವಿಂದನ ಸಹಾಯಕ್ಕೆ ಬರುವ ಡಾ.ಗೋವಿಂದ (ಡಾ.ರಾಜಕುಮಾರ್) ಹಾಗೂ ಆತನ ಪತ್ನಿ ಗೀತಾ (ಪಂಡರಿಬಾಯಿ), ಲಕ್ಷ್ಮೀಗೆ ತಮ್ಮ ಮನೆಯಲ್ಲಿ ನೆಲೆ ನೀಡುತ್ತಾರೆ. ಈ ಇಬ್ಬರು ಉಪಾಯದಿಂದ ಧನದಾಹಿ ಅರವಿಂದನ ತಂದೆಯ ಸೊಕ್ಕು ಮುರಿದು, ಕೊನೆಗೆ ಲಕ್ಷ್ಮೀಯನ್ನು ಹೇಗೆ ಗಂಡನ ಮನೆಗೆ ವಾಪಸ್ ಸೇರಿಸುತ್ತಾರೆ ಎಂಬುದೇ ಕಥೆ. ಚಿತ್ರದ ಸನ್ನಿವೇಶಗಳು, ಸಂಭಾಷಣೆ, ಹಾಡುಗಳು ಜೀವನಕ್ಕೆ ತುಂಬ ಹತ್ತಿರವಾಗಿದ್ದು, ಆಗಿನ ಕಾಲದಲ್ಲಿ ವರದಕ್ಷಿಣೆ ವಿರುದ್ಧ ಸಂಚಲನ ಮೂಡಿಸಿತ್ತು. 50ರ ದಶಕದಲ್ಲಿ ಹಲವರು ವರದಕ್ಷಿಣೆ ವಿರುದ್ಧ ಧ್ವನಿ ಎತ್ತುವಂತೆ ಮಾಡಿತ್ತು.
ಕನ್ನಡಕ್ಕೆ ಎಸ್.ಜಾನಕಿ: 48000 ಗೀತೆಗಳಿಗೆ ಧ್ವನಿಯಾಗಿದ್ದ ಎಸ್.ಜಾನಕಿ ಅವರು ‘ರಾಯರ ಸೊಸೆ’ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯವಾದರು. ಈ ಚಿತ್ರದ ‘ತಾಳಲೆಂತೋ ಶೋಕ ವೇಗ’ ಎಂಬ ಹಾಡಿಗೆ ಧ್ವನಿಯಾಗಿದ್ದರು. ಪಿ.ಗುಂಡೂರಾವ್ ಬರೆದಿದ್ದ ಈ ಹಾಡಿಗೆ ಆರ್. ದಿವಾಕರ್ ಸಂಗೀತ ನೀಡಿದ್ದರು.