ಡಾ.ರಾಜ್ ಹುಟ್ಟುಹಬ್ಬದಂದು ಏನೆಲ್ಲಾ ಆಯ್ತು ಗೊತ್ತಾ?

page 10 3
Published on

ಬೆಂಗಳೂರು: ಸಾಮಾನ್ಯವಾಗಿ ಡಾ. ರಾಜಕುಮಾರ್ ಹುಟ್ಟುಹಬ್ಬವೆಂದರೆ, ಕರ್ನಾಟಕದಲ್ಲಿ ದೊಡ್ಡ ಮಟ್ಟದ ಸಂಭ್ರಮ ಮನೆಮಾಡಿರುತ್ತದೆ. ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಅವರ ಸ್ಮಾರಕಕ್ಕೆ ಭೇಟಿ ಕೊಡುತ್ತಾರೆ. ರಾಜ್ಯದ್ಯಂತ ಅನೇಕ ಕಡೆ ಕಾರ್ಯಕ್ರಮಗಳು ಆಯೋಜಿತವಾಗಿರುತ್ತವೆ. ಈ ಬಾರಿ ಕರೋನಾ ಹಿನ್ನೆಲೆಯಲ್ಲಿ ಇಡೀ ದೇಶದಲ್ಲೇ ಲಾಕ್​ಡೌನ್ ಘೋಷಿಸಿರುವುದರಿಂದ, ಹುಟ್ಟುಹಬ್ಬದ ಸಂಭ್ರಮ ಎಂದಿನಂತೆ ಇರಲಿಲ್ಲ. ಪ್ರಮುಖವಾಗಿ ಈ ಬಾರಿ ಸಂಭ್ರಮ ಬೇಡ ಎಂದು ಅಭಿಮಾನಿಗಳಿಗೆ ಪುನೀತ್ ಮತ್ತು ರಾಘವೇಂದ್ರ ರಾಜಕುಮಾರ್ ಮನವಿ ಮಾಡಿದ್ದರು. ಮನೆಯಲ್ಲೇ ಅಪ್ಪಾಜಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ ಎಂದು ಕರೆ ನೀಡಿದ್ದರು. ಅದರಂತೆ ಎಲ್ಲೆಡೆ ಡಾ. ರಾಜಕುಮಾರ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗಿದೆ.

ಸಿಹಿ ಹಂಚಿದ ಶಿವಣ್ಣ: ಪ್ರತಿ ವರ್ಷದಂತೆ ಈ ಬಾರಿಯೂ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜಕುಮಾರ್ ಅವರ ಸ್ಮಾರಕಕ್ಕೆ ಭೇಟಿ ಕೊಟ್ಟ ಶಿವರಾಜಕುಮಾರ್, ಸ್ಮಾರಕವನ್ನು ಅಲಂಕರಿಸುವುದರ ಜತೆಗೆ, ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಅಭಿಮಾನಿಗಳಿಗೆ ಸಿಹಿ ಹಂಚಿ ಬಂದಿದ್ದಾರೆ. ಅಲ್ಲದೆ, ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರದ ಸಂದರ್ಭದಲ್ಲಿ ತೆಗೆದ ಡಾ. ರಾಜಕುಮಾರ್ ಜತೆಗಿನ ಒಂದು ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ.

ಪುನೀತ್ ವಿಶೇಷ ರೀಮಿಕ್ಸ್: ಇನ್ನು ಪುನೀತ್ ತಮ್ಮದೇ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಡಾ. ರಾಜಕುಮಾರ್ ಅಭಿನಯದ ‘ಯಾರು ಏನು ಮಾಡುವರು ...’ ಮತ್ತು ‘ನಿನದೇ ನೆನಪು ದಿನವು ಮನದಲ್ಲಿ ...’ ಹಾಡುಗಳನ್ನು ತಮ್ಮದೇ ಶೈಲಿಯಲ್ಲಿ ಹಾಡುವ ಮೂಲಕ ಗಿಫ್ಟ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ ತಾವು ಹಾಡುತ್ತಿರುವ ವೀಡಿಯೋ ಹಂಚಿಕೊಂಡಿದ್ದಾರೆ.

ತಾರೆಯರ ಶುಭಾಶಯ: ಇನ್ನು ಚಂದನವನದ ತಾರೆಯರೆಲ್ಲಾ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮದೇ ರೀತಿಯಲ್ಲಿ ಶುಭ ಕೋರಿದ್ದಾರೆ. ಸುದೀಪ್, ದರ್ಶನ್, ಧನಂಜಯ್, ಸುಮಲತಾ ಅಂಬರೀಶ್, ಸತೀಶ್ ನೀನಾಸಂ, ರಿಷಭ್ ಶೆಟ್ಟಿ ಸೇರಿದಂತೆ ಹಲವರು ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸಿದ್ದಾರೆ. ಕೆಲವರು ಮಾತಿನ ಮೂಲಕ ಶುಭ ಕೋರಿದರೆ, ಕೆಲವರು ಡಾ. ರಾಜಕುಮಾರ್ ಅವರ ವಿಭಿನ್ನ ಭಾವಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಬರೀ ಚಿತ್ರರಂಗವಷ್ಟೇ ಅಲ್ಲ, ಬಿ.ಎಸ್. ಯಡಿಯೂರಪ್ಪ, ಸಿದ್ಧರಾಮಯ್ಯ, ಎಂ.ಬಿ. ಪಾಟೀಲ್, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ರಾಜಕೀಯ ಮುಖಂಡರು, ಸೋಷಿಯಲ್ ಮೀಡಿಯಾ ಮೂಲಕ ಡಾ. ರಾಜ್ ಅವರ ಕೆಲಸ ಮತ್ತು ಸಾಧನೆಗಳನ್ನು ನೆನಪಿಸಿ ಕೊಂಡಿದ್ದಾರೆ. ಮೇಯರ್ ಎಂ. ಗೌತಮ್ುಮಾರ್ ರಾಜ್ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಇನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸರಳವಾಗಿ ರಾಜ್ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಅಗತ್ಯವಿರುವವರಿಗೆ ಸಹಾಯ: ಇನ್ನು ಡಾ. ರಾಜ್ ಅವರ ಹೆಸರಲ್ಲಿ ರಾಜ್ಯದ್ಯಂತ ಅಗತ್ಯವಿರು ವವರಿಗೆ ಸಹಾಯ ಮಾಡಲಾಗಿದೆ. ‘ಸಲಗ’ ಚಿತ್ರತಂಡವು ಸಿನಿಮಾ ಕಾರ್ವಿುಕರಿಗೆ ಆಹಾರ ಸಾಮಗ್ರಿ ವಿತರಿಸಿದರೆ, ಬೇರೆ ಕಡೆಗಳಲ್ಲೂ ರಾಜ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬದ ಸಂತೋಷದಲ್ಲಿ ಹಲವರು ರೀತಿಯ ಸಹಾಯ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net