ಸಿಕ್ಸರ್ ಸಂಹಿತಾಗೆ ಡಬಲ್​ ಧಮಾಕಾ: ಆರು ಸಿನಿಮಾಗಳಲ್ಲಿ ಎರಡು ಇದೇ ತಿಂಗಳು ರಿಲೀಸ್

sam
Published on

ಬೆಂಗಳೂರು: ಸಕಲೇಶಪುರ ಮೂಲದ ನಟಿ ಸಂಹಿತಾ ವಿನ್ಯಾ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಸರ್ ಬಾರಿಸುತ್ತಿದ್ದಾರೆ. ಸದ್ಯ ಅವರು ಅಭಿನಯಿಸಿರುವ ಆರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ಅದರಲ್ಲಿ ‘ಹೇ ಪ್ರಭು’ ಮತ್ತು ‘ಜಿಎಸ್‌ಟಿ’ ಇದೇ ತಿಂಗಳು ರಿಲೀಸ್ ಆಗುತ್ತಿರುವುದು ವಿಶೇಷ. ಕನ್ನಡ ರಾಜ್ಯೋತ್ಸವದ ಮಾಸದಲ್ಲಿ ಎರಡು ಸಿನಿಮಾಗಳು ತೆರೆಗೆ ಬರುತ್ತಿರುವುದು ನಟಿಯ ಖುಷಿಗೆ ಕಾರಣವಾಗಿದೆ. ಅದರಲ್ಲಿ ಇಂದು ಬಿಡುಗಡೆಯಾಗುತ್ತಿರುವ ವೆಂಕಟ್ ಭಾರದ್ವಾಜ್ ನಿರ್ದೇಶನದ ‘ಹೇ ಪ್ರಭು’ ಚಿತ್ರದಲ್ಲಿ ಸಂಹಿತಾ ಯೂಟ್ಯೂಬರ್ ಪಾತ್ರ ನಿರ್ವಹಿಸಿದ್ದಾರೆ. ‘‘ಹೇ ಪ್ರಭು’ ವೈದ್ಯಕೀಯ ಲೋಕದ ಸುತ್ತ ಸುತ್ತುವ ಕಥೆ. ಹಳ್ಳಿ ವಾತಾವರಣದಲ್ಲಿ ಏನೆಲ್ಲಾ ಅವ್ಯವಸ್ಥೆಗಳಾಗುತ್ತವೆ ಎಂಬುದನ್ನು ಈ ಸಿನಿಮಾ ತಿಳಿಸುತ್ತದೆ. ಇಲ್ಲಿ ನನ್ನದು ರೂಪಾ ಎಂಬ ಯೂಟ್ಯೂಬರ್ ಪಾತ್ರ. ಜಾಲತಾಣಗಳ ಮೂಲಕ ಪ್ರಚಾರ ಮಾಡುವ ನಾನು, ಒಂದು ಹಳ್ಳಿಗೆ ಹೋದಾಗ ಅಲ್ಲಿನ ನಡೆಯುವ ಘಟನೆಗಳು ನನ್ನನ್ನು ಬದಲಾಯಿಸುತ್ತವೆ. ಪಾತ್ರಕ್ಕಾಗಿ ಕೆಲ ಯೂಟ್ಯೂಬರ್‌ಗಳ ಸಂದರ್ಶನ ಹಾಗೂ ಅವರ ಹಾವ-ಭಾವ, ಮಾತಿನ ಶೈಲಿಯನ್ನು ಅರಿತುಕೊಂಡೆ. ಒಂದು ಹಳ್ಳಿಯ ವಾತಾವರಣದಲ್ಲಿ ಕೆಲಸ ಮಾಡುವ ಅವಕಾಶ ಈ ಚಿತ್ರದ ಮೂಲಕ ನನಗೆ ದೊರೆಯಿತು. ಕನ್ನಡ ರಾಜ್ಯೋತ್ಸವ ಮಾಸದಲ್ಲಿ ನಾನು ನಟಿಸಿರುವ ಎರಡು ಕನ್ನಡ ಚಿತ್ರಗಳು ರಿಲೀಸ್ ಆಗುತ್ತಿರುವುದು ಖುಷಿ ನೀಡಿದೆ. ಸದ್ಯ ನನ್ನ ಆರು ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿವೆ. ಹಾಗೆಯೇ ತಮಿಳಿನಲ್ಲಿ ನಟ ಜಿತನ್ ರಮೇಶ್ ಜತೆ ‘ಹಿಡನ್ ಕ್ಯಾಮರಾ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಅದರ ಶೂಟಿಂಗ್ ಭರದಿಂದ ಸಾಗಿದೆ. ಜತೆಗೆ ಕನ್ನಡದ ಸ್ಟಾರ್ ನಟನ ಜತೆ ಹೊಸ ಚಿತ್ರಕ್ಕೂ ಸಹಿ ಮಾಡಿದ್ದೇನೆ, ಮುಂದಿನ ತಿಂಗಳು ೋಷಣೆಯಾಗಲಿದೆ’ ಎಂದು ಸಂಹಿತಾ ವಿನ್ಯಾ ಖುಷಿ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net