

ಬೆಂಗಳೂರು: ‘ಲೀಡರ್ ಅನ್ನೋದು ಬೇಡ. ಎಲ್ಲರ ಜತೆಗೆ ನಾನೂ ಒಬ್ಬನಾಗಿ ಇರ್ತೀನಿ. ಲೀಡರ್ ಎನ್ನುವ ದೊಡ್ಡ ಪಟ್ಟ ಬೇಡ. ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ ...’
ಬೆಳಗಾವಿಯಲ್ಲಿ ಕನ್ನಡ ಧ್ವಜ ಸುಟ್ಟ ಮತ್ತು ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ವಿರೂಪಗೊಳಿಸಿದ ಘಟನೆಯನ್ನು ಖಂಡಿಸಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಶಿವರಾಜಕುಮಾರ್ ನೇತೃತ್ವದಲ್ಲಿ ಚಿತ್ರರಂಗದವರು ಒಂದಾಗಿ ಹೋರಾಟ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ವಿಷಯವನ್ನು ಶಿವರಾಜಕುಮಾರ್ ಅವರೆದುರಿಟ್ಟರೆ, ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ ಎನ್ನುತ್ತಾರೆ.
ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ಚಿತ್ರದ ಪ್ರೀರಿಲೀಸ್ ಇವೆಂಟ್ನಲ್ಲಿ ಮಾತನಾಡಿದ ಅವರು, ‘ಭಾಷೆ ಬಹಳ ಮುಖ್ಯ. ಈ ದೇಶದಲ್ಲಿ ಹಲವು ಭಾಷೆಗಳಿವೆ. ಆದರೂ ನಾವ್ಯಾಕೆ ಭಾರತೀಯರು ಎನ್ನುತ್ತೇವೆ ಎಂದರೆ, ನಾವೆಲ್ಲರೂ ಒಂದೇ ಎಂದು ತೋರಿಸಿಕೊಳ್ಳೋಕೆ. ಒಂದು ರಾಜ್ಯದಲ್ಲಿರಬೇಕಾದರೆ, ಆ ಭಾಷೆ ಮತ್ತು ಸಂಸ್ಕೃತಿಗೆ ಗೌರವ ಕೊಡುವುದು ಎಲ್ಲರ ಧರ್ಮ. ನಾನು ಹುಟ್ಟಿದ್ದು ಚೆನ್ನೈನಲ್ಲಿ. ಅಲ್ಲಿ ತಮಿಳು ಓದಿದ್ದೀನಿ, ಕಲಿತಿದ್ದೀನಿ. ಅದು ನಮಗೆ ಮೂರನೆಯ ಭಾಷೆಯಾಗಿತ್ತು. ಬೇಡ ಎಂದು ಬಿಟ್ಟಿದ್ದರೆ ಹೇಗೆ? ಕರ್ನಾಟಕದಲ್ಲಿರುವಾಗ ಕನ್ನಡವನ್ನು ಪ್ರೀತಿಸಬೇಕು. ಅದನ್ನು ತುಳಿಯುವುದಕ್ಕೆ ನೋಡಬಾರದು. ಯಾರಿಗೂ ಪವರ್ ಇಲ್ಲ ಅಂತ ಅಂದುಕೊಳ್ಳಬಾರದು. ಮನುಷ್ಯನಿಗೆ ಕೋಪ ಬಂದರೆ, ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾನೆ. ಸರ್ಕಾರ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ವೋಟ್ ವಿಷಯವಾಗಿ ಸುಮ್ಮನಿರುವುದು ತಪು್ಪ. ನಮ್ಮ ಭಾಷೆಗಾಗಿ ನಾವು ಹೋರಾಡಬೇಕು. ಭಾಷೆಗೆ ಪ್ರಾಣ ಕೊಡುವುದಕ್ಕೂ ರೆಡಿ’ ಎಂದರು.
ಬಾವುಟ ತಾಯಿಯಿದ್ದಂತೆ!: ಬಾವುಟವನ್ನು ಅಷ್ಟು ಸುಲಭವಾಗಿ ಸುಡುವುದಕ್ಕೆ ಹೇಗೆ ಸಾಧ್ಯ? ಎಂದು ಪ್ರಶ್ನಿಸುವ ಅವರು, ‘ಬಾವುಟವನ್ನು ಸುಡುವುದು ತಾಯಿಯನ್ನು ಸುಟ್ಟ ಹಾಗೆ. ನಮ್ಮ ತಾಯಿಗೇನಾದರೂ ಆದರೆ ನಾವು ಸುಮ್ಮನಿರುವುದಕ್ಕೆ ಸಾಧ್ಯವೇ? ನಾವು ಎಲ್ಲ ಭಾಷೆಗೂ ಗೌರವ ಕೊಡುತ್ತೇವೆ. ನಮಗೂ ಗೌರವ ಸಿಗಬೇಕು. ಈ ವಿಷಯದಲ್ಲಿ ಸರ್ಕಾರ ಗಟ್ಟಿ ನಿಲುವು ತೆಗೆದುಕೊಳ್ಳಬೇಕು. ಯಾರೇ ತಪು್ಪ ಮಾಡಿದರೂ ಬಿಡಬೇಡಿ. ನಮ್ಮವರು ತಪು್ಪ ಮಾಡಿದರೂ ಶಿಕ್ಷೆ ಕೊಡಿ. ನಮ್ಮವರು ಮಾಡಿದ್ದು ನಾನು ಕೇಳಿಲ್ಲ. ನಾವು ಎಲ್ಲರನ್ನೂ ಪ್ರೀತಿಸುತ್ತೇವೆ. ಎಲ್ಲರಿಗೂ ಜಾಗ ಕೊಡುತ್ತೇವೆ. ‘ಅಖಂಡ’ ಎನ್ನುವ ತೆಲುಗು ಚಿತ್ರವನ್ನು ನಾನು ಮೊದಲ ದಿನ ನೋಡಿದೆ. ಅದಕ್ಕೆ ಕಾರಣ ತೆಲುಗು ನಟ ಬಾಲಕೃಷ್ಣ ಮೇಲಿರುವ ಗೌರವ. ಎಲ್ಲ ಭಾಷೆಯ ಸಿನಿಮಾಗಳನ್ನೂ ನೋಡಿ. ಕನ್ನಡ ಸಿನಿಮಾಗಳನ್ನು ಹೆಚ್ಚು ನೋಡಿ’ ಎಂದು ಮನವಿ ಸಲ್ಲಿಸಿದರು ಶಿವರಾಜಕುಮಾರ್.