ಆಪರೇಷನ್‌ಗೆ ಸಿದ್ಧರಾದ ಡಾಲಿ-ಶಿವಣ್ಣ : ಹೇಮಂತ್ ನಿರ್ದೇಶನದಲ್ಲಿ ಮೂಡಿಬರಲಿದೆ ‘666 ಆಪರೇಷನ್ ಡ್ರೀಮ್ ಥಿಯೇಟರ್’

dhana
Published on

ಬೆಂಗಳೂರು: ‘ಜೇಡರ ಬಲೆ’, ‘ಗೋವಾದಲ್ಲಿ ಸಿಐಡಿ 999’, ‘ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿಐಡಿ 999’, ‘ಆಪರೇಷನ್ ಡೈಮೆಂಟ್ ರಾಕೆಟ್’ ಚಿತ್ರಗಳ ಮೂಲಕ ಕನ್ನಡಕ್ಕೆ ಬಾಂಡ್ ಹಾಗೂ ಆಪರೇಷನ್ ಚಿತ್ರಗಳನ್ನು ಪರಿಚಯಿಸಿದ ಖ್ಯಾತಿ ವರನಟ ಡಾ.ರಾಜಕುಮಾರ್ ಹಾಗೂ ನಿರ್ದೇಶಕರಾದ ದೊರೈ-ಭಗವಾನ್ ಜೋಡಿಗೆ ಸಲ್ಲುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಬಾಂಡ್ ಸಿನಿಮಾಗಳು ಬಂದಿಲ್ಲ. ಕಳೆದ ವರ್ಷ ‘ರಾಜು ಜೇಮ್ಸ್ ಬಾಂಡ್’ ಬಂದರೂ, ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಅದರ ಬೆನ್ನಲ್ಲೇ ಬಾಂಡ್ ಚಿತ್ರದ ಮೂಲಕ ಸದ್ದು ಮಾಡಲು ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್ ಎಂ.ರಾವ್ ರೆಡಿಯಾಗಿದ್ದಾರೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ಆ್ಯಕ್ಷನ್ ಚಿತ್ರ ಘೋಷಿಸಿರುವ ಅವರು, ಇಂದು ಮುಹೂರ್ತ ನೆರವೇರಿಸಲಿದ್ದಾರೆ. ಇದೇ ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಧನಂಜಯ ಮದುವೆ ಬಳಿಕ ಒಪ್ಪಿಕೊಳ್ಳುತ್ತಿರುವ ಮೊದಲ ಚಿತ್ರವಿದು. ವಿಶೇಷ ಪಾತ್ರದಲ್ಲಿ ಶಿವರಾಜಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ‘ಟಗರು’, ‘ಬೈರಾಗಿ’ ಬಳಿಕ ಶಿವಣ್ಣ-ಡಾಲಿ ಮತ್ತೆ ಒಂದಾಗುತ್ತಿದ್ದಾರೆ. 70ರ ದಶಕದ ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ. ಇನ್ನು, ಶಿವಣ್ಣ ಪಾತ್ರವು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯಾಗಿ ಉಳಿಯಲಿದೆ ಎಂದು ತಂಡ ಹೇಳಿಕೊಂಡಿದೆ. ಚರಣ್ ರಾಜ್ ಸಂಗೀತ, ಅದ್ವೆತ ಗುರುಮೂರ್ತಿ ಛಾಯಾಗ್ರಹಣ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಚಿತ್ರಕ್ಕಿರಲಿದೆ.

‘ಭೈರವನ ಕೊನೆಯ ಪಾಠ’ಕ್ಕೆ ಬ್ರೇಕ್: ಶಿವಣ್ಣ ಮತ್ತು ಹೇಮಂತ್ ಕಾಂಬಿನೇಷನ್‌ನಲ್ಲಿ ‘ಭೈರವನ ಕೊನೆ ಪಾಠ’ ಕಳೆದ ವರ್ಷ ಘೋಷಣೆಯಾಗಿತ್ತು. ಆದರೆ, ಅನಾರೋಗ್ಯದಿಂದ ಈಗಷ್ಟೆ ಚೇತರಿಸಿಕೊಳ್ಳುತ್ತಿರುವ ಶಿವಣ್ಣಗೆ ಆ್ಯಕ್ಷನ್, ಕುದುರೆ ಸವಾರಿಯಂತಹ ಸನ್ನಿವೇಶಗಳಲ್ಲಿ ನಟಿಸುವುದು ಕಷ್ಟವಾಗಲಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಆ ಸಿನಿಮಾ ಮಾಡುವುದು ಅಸಾಧ್ಯ ಎನ್ನಲಾಗಿದೆ. ಹೀಗಾಗಿಯೇ ಆ ಚಿತ್ರವನ್ನು ಸ್ಥಗಿತಗೊಳಿಸಿರುವ ಹೇಮಂತ್, ‘666...’ ಜತೆ ವಾಪಸ್ಸಾಗಿದ್ದಾರೆ. ‘ಶಿವಣ್ಣ ಜತೆ ಕೆಲಸ ಮಾಡಬೇಕು ಅಂತ ತುಂಬ ಆಸೆ ಇತ್ತು. ಆದರೆ, ‘ಭೈರವನ ಕೊನೆ ಪಾಠ’ ಸಾಧ್ಯವಾಗುತ್ತಿಲ್ಲ ಅಂತ ಗೊತ್ತಾದಾಗ, ಈ ಕಥೆ ಹೊಳೆಯಿತು. ‘ಜೇಡರಬಲೆ’, ‘ಸಿಐಡಿ 999’ನಂತಹ ಸಿನಿಮಾ ಮಾಡುವ ಆಲೋಚನೆಯೂ ಇತ್ತು. ಇದೀಗ ‘666...’ ಅದೆರಡೂ ಈಡೇರುತ್ತಿದೆ. ಇದೇ ಜುಲೈ ಅಂತ್ಯಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ.

ಶಿವಣ್ಣ ಮತ್ತು ಧನಂಜಯ ಅವರಂತಹ ಇಬ್ಬರು ಅದ್ಭುತ ನಟರ ಜತೆ ಕೆಲಸ ಮಾಡುಲಿರುವುದು ಖುಷಿ ನೀಡಿದೆ. ಅವರಿಲ್ಲಿ ನಾಯಕ, ವಿಲನ್ ಅಂತಲ್ಲ. ಅವರು ಮುಖಾಮುಖಿಯಾದರೂ ಮಜಾ ಇರುತ್ತದೆ, ಜತೆಯಾಗಿ ಬಂದರೂ ಮಜವಾಗಿರುತ್ತದೆ. ಆದರೆ, ನಮ್ಮ ಚಿತ್ರದಲ್ಲಿ ಅವರು ಅಕ್ಕ-ಪಕ್ಕದಲ್ಲೇ ಇರುತ್ತಾರೆ. ಬೃಹತ್ ಸೆಟ್‌ಗಳಲ್ಲಿ, ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಮುಂದಿನ ಸಂಕ್ರಾಂತಿಗೆ ರಿಲೀಸ್ ಮಾಡುವ ಆಲೋಚನೆಯಿದೆ. | ಹೇಮಂತ್ ಎಂ. ರಾವ್, ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net