ಹೊಸ ವರ್ಷಕ್ಕೆ ಪೊಗರು: ಶುರುವಾಗುತ್ತದಾ ಸ್ಟಾರ್ ಚಿತ್ರಗಳ ದರ್ಬಾರು?

Ullasa Collage
Published on

ಬೆಂಗಳೂರು: ಡಿಸೆಂಬರ್ ಕೊನೆಯ ವಾರ ಕನ್ನಡ ಚಿತ್ರರಂಗಕ್ಕೆ ಬಹಳ ಲಕ್ಕಿ ವಾರ ಎಂಬ ನಂಬಿಕೆ ಕೆಲವು ವರ್ಷಗಳಿಂದ ಇದೆ. ಅದಕ್ಕೆ ಸರಿಯಾಗಿ, ಡಿಸೆಂಬರ್ ಕೊನೆಯಲ್ಲಿ ಬಿಡುಗಡೆಯಾದ ‘ಮುಂಗಾರು ಮಳೆ’, ‘ಮಿಸ್ಟರ್ ಆ್ಯಂಡ್​ ಮಿಸಸ್ ರಾಮಾಚಾರಿ’, ‘ಕಿರಿಕ್ ಪಾರ್ಟಿ’ ಮುಂತಾದ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಈ ವರ್ಷ ಯಾವ ಚಿತ್ರ ಬಿಡುಗಡೆಯಾಗಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು.

ಮೊದಲಿಗೆ, ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರವು ಡಿಸೆಂಬರ್ 24ರಂದು ಬಿಡುಗಡೆಯಾಗಬಹುದು ಎಂದು ಹೇಳಲಾಗಿತ್ತು. ಆದರೆ, ಆ ಚಿತ್ರ ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹೋಗಿದೆ. ಎಲ್ಲ ಅಂದುಕೊಂಡಂತೆ ಆದರೆ, ಶರಣ್ ಅಭಿನಯದ ‘ಅವತಾರ್ ಪುರುಷ’ ಚಿತ್ರವನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ ಎಂದು ನಿರ್ವಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದ್ದರು. ಆದರೆ, ಆ ದಿನಾಂಕದಂದು ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಕಾಣುತ್ತಿಲ್ಲ. ಇನ್ನು ಧ್ರುವ ಸರ್ಜಾ ಅಭಿನಯದ ‘ಪೊಗರು’ ಬಿಡುಗಡೆ ಆಗುವುದು ಖಂಡಿತ ಎಂದು ಹೇಳಲಾಗಿತ್ತು. ಈಗ ಆ ಚಿತ್ರ ಸಹ ಜನವರಿಗೆ ಹೋಗಿದೆ. ಅಲ್ಲಿಗೆ, ಈ ವರ್ಷ ಯಾವ ಸ್ಟಾರ್ ಚಿತ್ರ ಸಹ ಬಿಡುಗಡೆಯಾಗುತ್ತಿಲ್ಲ.

ಕರೊನಾ ಮತ್ತು ಲಾಕ್​ಡೌನ್​ನಿಂದ ಏಳೆಂಟು ತಿಂಗಳುಗಳ ಕಾಲ ಚಿತ್ರೀಕರಣ ಚಟುವಟಿಕೆಗಳು ನಿಂತಿದ್ದರಿಂದ, ಈ ವರ್ಷ ದೊಡ್ಡ ಸ್ಟಾರ್​ಗಳ ಚಿತ್ರಗಳು ಬಿಡುಗಡೆಯಾಗುವುದು ಸಾಧ್ಯವಿಲ್ಲ ಎಂಬ ವಿಷಯ ಜುಲೈ-ಆಗಸ್ಟ್ ಹೊತ್ತಿಗೆಲ್ಲ ಸ್ಪಷ್ಟವಾಗಿತ್ತು. ಆದರೂ ಅಕ್ಟೋಬರ್ 15ರಿಂದ ಚಿತ್ರಪ್ರದರ್ಶನ ಪ್ರಾರಂಭಿಸಬಹುದು ಎಂದು ಕೇಂದ್ರ ಸರ್ಕಾರ ಘೋಷಿಸಿದ್ದರಿಂದ ಮತ್ತು ಕೆಲವು ಸ್ಟಾರ್ ಚಿತ್ರಗಳ ಕೆಲಸಗಳು ಪೂರ್ತಿಯಾಗಿದ್ದರಿಂದ, ವರ್ಷದ ಕೊನೆಗಾದರೂ ಸ್ಟಾರ್ ಚಿತ್ರಗಳು ಬಿಡುಗಡೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಆ ನಿರೀಕ್ಷೆ ಇದೀಗ ಸುಳ್ಳಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ, ಸ್ಟಾರ್​ಗಳ ಅಥವಾ ನಿರೀಕ್ಷಿತ ಚಿತ್ರಗಳಷ್ಟೇ ಅಲ್ಲ, ಹೊಸಬರ ಚಿತ್ರಗಳನ್ನು ಸಹ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡದವರು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಪ್ರೇಕ್ಷಕರ ಅಭಾವ. ‘ಆಕ್ಟ್ 1978’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೂ, ಆ ನಂತರ ಬಿಡುಗಡೆಯಾದ ಚಿತ್ರಗಳ ಬಗ್ಗೆ ಪ್ರೇಕ್ಷಕರು ಅಷ್ಟೇನೂ ಒಲವು ತೋರಿಸಿಲ್ಲ. ಇದರಿಂದಾಗಿ, ಬೆರಳೆಣಿಕೆಯಷ್ಟು ಹೊಸಬರ ಚಿತ್ರಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಯಾವುದೇ ನಿರೀಕ್ಷಿತ ಚಿತ್ರವೂ ಬಿಡುಗಡೆಗೆ ಸಿದ್ಧವಿಲ್ಲ. ನಿರೀಕ್ಷಿತ ಚಿತ್ರ ಬಿಡುಗಡೆ ಆಗಬೇಕೆಂದರೆ, ಮುಂದಿನ ವರ್ಷದವರೆಗೂ ಕಾಯಬೇಕು.

2021ರ ಜನವರಿಯ ಮೊದಲ ಅಥವಾ ಎರಡನೆಯ ವಾರ ಧ್ರುವ ಸರ್ಜಾ ಅಭಿನಯದ ‘ಪೊಗರು’ ಬಿಡುಗಡೆಯಾಗುವ ಮೂಲಕ ಸ್ಟಾರ್​ಗಳ ಸಿನಿಮಾಗಳ ಖಾತೆ ತೆರೆಯಲಿದೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿರುವ ನಿರ್ದೇಶಕ ನಂದಕಿಶೋರ್, ಜನವರಿಯ ಮೊದಲೆರಡು ವಾರಗಳಲ್ಲಿ ಚಿತ್ರ ಬಿಡುಗಡೆ ಆಗುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ. ಈ ಚಿತ್ರಕ್ಕೆ ಜನರಿಂದ ಸಿಗುವ ಪ್ರತಿಕ್ರಿಯೆ ಬಹಳ ನಿರ್ಣಾಯಕವಾಗಿದ್ದು, ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ನೋಡಿಕೊಂಡು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಹಲವು ನಿರ್ಮಾಪಕರು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net