

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್್ಸ’ ಸಿನಿಮಾ ಮೇಲೆ ಇಡೀ ರಾಜ್ಯ ಕಣ್ಣಿಟ್ಟಿದೆ. ಅವರ ಕೊನೇ ಚಿತ್ರ ಎಂಬ ಕಾರಣಕ್ಕೆ ಸಾಕಷ್ಟು ನಿರೀಕ್ಷೆಗಳ ಜತೆಗೆ ಪ್ರೇಕ್ಷಕರಲ್ಲಿಯೂ ಅತೀವ ಕುತೂಹಲವಿದೆ. ಅದೆಲ್ಲದರ ಜತೆಗೆ ಚಿತ್ರದಲ್ಲಿ ಪುನೀತ್ ಅವರ ಧ್ವನಿಯೇ ಕೇಳಲಿದೆಯೇ ಅಥವಾ ಬೇರೆಯಾರಾದರೂ ಡಬ್ ಮಾಡಲಿದ್ದಾರೆಯೇ ಎಂಬ ಪ್ರಶ್ನೆಯೂ ಅವರ ಅಭಿಮಾನಿಗಳಲ್ಲಿದೆ. ಈ ಹಿಂದೆ ಪುನೀತ್ ಅವರಿಗೆ ಅಣ್ಣ ಶಿವರಾಜಕುಮಾರ್ ಡಬ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇನ್ನೊಂದು ಆಯ್ಕೆಯಾಗಿ, ಚಿತ್ರೀಕರಣದ ವೇಳೆ ಪುನೀತ್ ಮಾತನಾಡಿದ್ದನ್ನೇ ಚಿತ್ರದಲ್ಲಿ ಬಳಸಿಕೊಳ್ಳಬಹುದು ಎನ್ನಲಾಗಿತ್ತು. ಆದರೆ, ಇದರಲ್ಲಿ ನಿಖರತೆ ಇಲ್ಲ.
ಈ ಬಗ್ಗೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಅವರನ್ನು ಕೇಳಿದರೆ, ಉತ್ತರಕ್ಕಾಗಿ ಇನ್ನೊಂದಿಷ್ಟು ದಿನ ಕಾಯಲೇಬೇಕು ಎನ್ನುತ್ತಾರೆ. ‘ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರೀಕರಣೋತ್ತರ ಕೆಲಸಗಳು ನಡೆಯುತ್ತಿವೆ. ಇದೀಗ ನಮ್ಮ ಮುಂದಿರುವ ದೊಡ್ಡ ಸವಾಲೆಂದರೆ ಪುನೀತ್ ಅವರ ಧ್ವನಿ. ಚಿತ್ರೀಕರಣ ಸಂದರ್ಭದಲ್ಲಿ ಪುನೀತ್ ಆಡಿದ ಮಾತುಗಳನ್ನು ನೇರವಾಗಿ ಬಳಸಿಕೊಳ್ಳೋಣ ಎಂದರೆ, ಹಿನ್ನೆಲೆಯಲ್ಲಿ ಸಿಕ್ಕಾಪಟ್ಟೆ ಶಬ್ದ ಕೇಳಿಸುತ್ತದೆ. ಆ ಶಬ್ದವನ್ನು ತೆಗೆಯುವುದಕ್ಕೆ ಸಾಧ್ಯವಾ ಎಂದು ತಂತ್ರಜ್ಞಾನದ ಮೊರೆ ಹೋಗಿದ್ದೇವೆ. ಫೆಬ್ರವರಿ ವೇಳೆಗೆ ಅದರ ಫಲಿತಾಂಶ ಬರುವ ಸಾಧ್ಯತೆ ಇದ್ದು, ಅದನ್ನು ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಒಂದು ಪಕ್ಷ ಸಾಧ್ಯವಾಗದಿದ್ದರೆ, ಪುನೀತ್ ಅವರ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್ ಮಾಡಿಸುವುದು ಅನಿವಾರ್ಯವಾಗುತ್ತದೆೆ’ ಎನ್ನುತ್ತಾರೆ ಚೇತನ್.
ಇನ್ನು, ಚಿತ್ರದ ಬಿಡುಗಡೆ ಬಗ್ಗೆ ಮಾತನಾಡುವ ಚೇತನ್, ‘ಮಾರ್ಚ್ 17, ಪುನೀತ್ ಅವರ ಬರ್ತ್ಡೇ. ಆವತ್ತೇ ನಮ್ಮ ಸಿನಿಮಾ ರಿಲೀಸ್ ಮಾಡುವ ವಿಚಾರವಿದೆ. ಅಂದು ಕೋವಿಡ್ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇನ್ನುಳಿದ ಕಲಾವಿದರ ಡಬ್ಬಿಂಗ್ ಕೆಲಸ ಮುಗಿದಿದೆ. ಸದ್ಯ ಡಿಐ, ಗ್ರಾಫಿಕ್ಸ್ ಕೆಲಸ ನಡೆಯುತ್ತಿದೆ’ ಎನ್ನುತ್ತಾರೆ. ಕಿಶೋರ್ ಪಾಟಿಕೊಂಡ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಪುನೀತ್ಗೆ ಪ್ರಿಯಾ ಆನಂದ್ ಜೋಡಿಯಾಗಿದ್ದಾರೆ. ಚರಣ್ ರಾಜ್ ಸಂಗೀತ್, ಜೆ. ಸ್ವಾಮಿ ಛಾಯಾಗ್ರಹಣವಿದೆ.