ಕಾದುನೋಡಿ ಅಂತಿದ್ದಾರೆ ಕಿಚ್ಚ; 21ಕ್ಕೆ ಬದಲಾಗಲಿದೆಯೇ ಫ್ಯಾಂಟಮ್​ ಟೈಟಲ್​?

Ullasa Sudeep
Published on

ಬೆಂಗಳೂರು: ‘‘ವರ್ಲ್ಡ್ ಆಫ್ ಫ್ಯಾಂಟಮ್​ನಿಂದ ದೊಡ್ಡ ಘೋಷಣೆ ...’ ಹಾಗಂತ ಹೇಳಿಕೊಂಡಿದ್ದಾರೆ ಸುದೀಪ್. ಸೋಮವಾರ ಬೆಳಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರೊಂದು ಪೋಸ್ಟ್ ಹಾಕಿದ್ದಾರೆ. ಜನವರಿ 21ರ ಗುರುವಾರ ಸಂಜೆ ನಾಲ್ಕು ಗಂಟೆ ಮೂರು ನಿಮಿಷಕ್ಕೆ ಸರಿಯಾಗಿ, ಅನೂಪ್ ಭಂಡಾರಿ ನಿರ್ದೇಶನದ ‘ಫ್ಯಾಂಟಮ್ ಚಿತ್ರದಿಂದ ಒಂದು ಮಹತ್ತರವಾದ ಘೋಷಣೆ ಹೊರಬೀಳಲಿದೆ ಎಂದಿದ್ದಾರೆ. ಯಾವಾಗ ಸುದೀಪ್ ಇಂಥದ್ದೊಂದು ಪೋಸ್ಟ್ ಹಾಕಿದರೋ, ಆ ದೊಡ್ಡ ಸುದ್ದಿ ಏನಿರಬಹುದು ಎಂಬ ಕುತೂಹಲ ಅವರ ಅಭಿಮಾನಿವಲಯದಲ್ಲಿ ಕೇಳಿಬರುತ್ತಿದೆ. ಪ್ರಮುಖವಾಗಿ ಜನವರಿ ತಿಂಗಳ ಕೊನೆಯಲ್ಲಿ ದುಬೈನಲ್ಲಿ ಚಿತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದು ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಸುದ್ದಿ ಇರಬಹುದಾ ಎಂಬ ಗುಮಾನಿ ಹಲವರಲ್ಲಿದೆ.

ಇದರ ಜತೆಗೆ ಚಿತ್ರದ ಹೆಸರಿನ ಅಧಿಕೃತ ಘೋಷಣೆಯಾಗಲಿದೆಯಾ ಎಂಬ ಪ್ರಶ್ನೆಯೂ ಹಲವರಲ್ಲಿದೆ. ಇದುವರೆಗೂ ಚಿತ್ರವನ್ನು ‘ಫ್ಯಾಂಟಮ್ ಎಂಬ ಹೆಸರಿನಿಂದ ಗುರುತಿಸಲಾಗಿದೆಯಾದರೂ, ಚಿತ್ರದ ನಿಜವಾದ ಹೆಸರು ಬೇರೆಯೇ ಇದೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಅದಕ್ಕೆ ಸರಿಯಾಗಿ, ಚಿತ್ರತಂಡದವರು ಸಹ ‘ಫ್ಯಾಂಟಮ್ ಎಂಬ ಹೆಸರಿಗಿಂತ, ‘ವಿಕ್ರಾಂತ್ ರೋಣ - ದಿ ವರ್ಲ್ಡ್ ಆಫ್ ಫ್ಯಾಂಟಮ್ ಎಂಬ ಹೆಸರನ್ನೇ ಹೆಚ್ಚು ಬಳಕೆ ಮಾಡುತ್ತಿದೆ. ಹಾಗಾಗಿ, ಹೊಸ ಹೆಸರಿನ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯೂ ಇದೆ.

ಇನ್ನು, ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳಾಗುತ್ತಿರುವುದರಿಂದ, ‘ಫ್ಯಾಂಟಮ್ ಮೂಲಕವೇ ರಜತಮಹೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ಸಿಗಬಹುದು ಎಂಬ ಸುದ್ದಿಯೂ ಇದೆ. ಇನ್ನು ನಾಯಕಿಯ ಪರಿಚಯ, ಚಿತ್ರತಂಡಕ್ಕೆ ಜಾಕ್ವೆಲೀನ್ ಫರ್ನಾಂಡಿಸ್ ಎಂಟ್ರಿ ... ಹೀಗೆ ಚಿತ್ರತಂಡಕ್ಕೆ ಘೋಷಿಸಲಿಕ್ಕೆ ಇನ್ನೂ ಕೆಲವು ವಿಷಯಗಳಿವೆ. ಈ ಪೈಕಿ ಯಾವುದಾದರೊಂದು ವಿಷಯ ಇದೇ 21ರಂದು ಅಧಿಕೃತವಾಗಿ ಹೊರಬೀಳಲಿದೆ ಎಂದು ಸಹ ಹೇಳಲಾಗುತ್ತಿದೆ. ಈ ಐದರ ಪೈಕಿ ಯಾವುದು ನಿಜವಾಗುತ್ತದೆ ಎಂದು ಗೊತ್ತಾಗುವುದಕ್ಕೆ ಗುರುವಾರ ಅಧಿಕೃತವಾಗಿ ಘೋಷಣೆಯಾಗುವ ತನಕ ಕಾಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net