

Silk Smitha : ದಕ್ಷಿಣ ಭಾರತದ ಚಿತ್ರರಂಗದಲ್ಲಿ 80ರ ದಶಕದಲ್ಲಿ ಮಿಂಚು ಹರಿಸಿದ್ದ ನಟಿ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ದುರಂತ ಸಾವಿಗೀಡಾದರು. ಸ್ಮಿತಾ ಅವರ ದೇಹದಲ್ಲಿ ಹೆಚ್ಚುವರಿ ಆಲ್ಕೋಹಾಲ್ ಕಂಡುಬಂದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಿರ್ಣಯಿಸಲಾಯಿತು.
80 ದಶಕದಲ್ಲಿ ಸಿಲ್ಕ್ ಸ್ಮಿತಾ ಬಹುಬೇಡಿಕೆಯ ನಟಿಯಾಗಿದ್ದರು. ಹೆಚ್ಚಾಗಿ ಅವರು ಕಾಮಪ್ರಚೋದಕ ದೃಶ್ಯಗಳಲ್ಲಿ ನಟಿಸುತ್ತಿದ್ದರು. ಐಟಂ ಸಾಂಗ್ಗಳಿಗೆ ಹೆಚ್ಚಾಗಿ ಸೊಂಟ ಬಳುಕಿಸುತ್ತಿದ್ದರು. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಹೊಳೆಯುವ ಕಣ್ಣುಗಳು, ಸುವಾಸನೆಯ ಕೂದಲು ಮತ್ತು ದ್ರಾವಿಡ ಮೈಬಣ್ಣವು ಸಿಲ್ಕ್ ಸ್ಮಿತಾಳನ್ನು ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ದಿತು. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಅವರ ಆತ್ಮಹತ್ಯೆ ಸುದ್ದಿ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನುಂಟು ಮಾಡಿತು.
ಇದೀಗ ಸಿಲ್ಕ್ ಸ್ಮಿತಾ ಅವರ ಕುರಿತಾದ ಇಂಟೆರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ಅದೇನೆಂದರೆ, ಸಿಲ್ಕ್ ಸ್ಮಿತಾ ಅವರು ಓರ್ವ ವ್ಯಕ್ತಿಯನ್ನು ಮದುವೆಯಾಗಲು ನಿರ್ಧರಿಸಿದ್ದರಂತೆ. ಈ ವಿಚಾರವನ್ನು ಸಿಲ್ಕ್ ಸ್ಮಿತಾ ಅವರ ಗೆಳತಿ ಹಾಗೂ ಪ್ರಸಿದ್ಧ ನೃತ್ಯ ಸಂಯೋಜಕಿ ಪುಲಿಯೂರು ಸರೋಜಾ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ನಾನು ತಿರುಪತಿಗೆ ಹೋಗುವ ಎರಡು ದಿನಗಳ ಮೊದಲು, ಸಿಲ್ಕ್ ಸ್ಮಿತಾ ಅವರು ಒಂದು ಆಭರಣ ಪೆಟ್ಟಿಗೆಯನ್ನು ತಂದು ನನಗೆ ತೋರಿಸಿದರು. ಅಲ್ಲದೆ, ನಾನು ಮದುವೆಯಾಗುತ್ತಿದ್ದೇನೆ ಎಂದು ಹೇಳಿ ಹುಡುಗನ ಹೆಸರನ್ನು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು. ರಾಧಾಕೃಷ್ಣನ್ ಎಂಬ ವ್ಯಕ್ತಿ ಸಿಲ್ಕ್ ಸ್ಮಿತಾ ಬಳಿ ಕೆಲಸ ಮಾಡುತ್ತಿದ್ದ. ಅವರ ಮಗನನ್ನೇ ಮದುವೆ ಆಗುತ್ತೇನೆಂದು ಸಿಲ್ಕ್ ಸ್ಮಿತಾ ಹೇಳಿದ್ದರು ಎಂದು ಪುಲಿಯೂರು ಸರೋಜಾ ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದೀಗ ಸರೋಜಾ ಅವರ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಿಲ್ಕ್ ಸ್ಮಿತಾ ಸಾವಿಗೆ ರಾಧಾಕೃಷ್ಣನ್ ಮತ್ತು ಅವರ ಮಗ ಕಾರಣ ಇರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಅಂದಹಾಗೆ ಸಿಲ್ಕ್ ಸ್ಮಿತಾ ಅಲಿಯಾಸ್ ವಿಜಯಲಕ್ಷ್ಮಿ ಆಂಧ್ರಪ್ರದೇಶದ ದೆಂಡ್ಲೂರು ಎಂಬ ಹಳ್ಳಿಯಲ್ಲಿ ಜನಿಸಿದರು. ಸಿಲ್ಕ್ ಸ್ಮಿತಾ ಸಿನಿಮಾಗಳಲ್ಲಿ ಟಚ್ ಅಪ್ ಆರ್ಟಿಸ್ಟ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ನಟ ಮತ್ತು ನಿರ್ದೇಶಕ ವಿನು ಚಕ್ರವರ್ತಿ ಎವಿಎಂ ಸ್ಟುಡಿಯೋ ಬಳಿ ಸಿಲ್ಕಾ ಸ್ಮಿತಾ ಅವರನ್ನು ಭೇಟಿಯಾದಾಗ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ಸಿಕ್ಕಿತು.
ಸ್ಮಿತಾ ಅವರಿಗೆ 1980ರಲ್ಲಿ ಚಲನಚಿತ್ರಗಳಲ್ಲಿ ಮೊದಲ ಅವಕಾಶ ಸಿಕ್ಕಿತು. ವಂಡಿಚಕ್ರ ಚಿತ್ರದಲ್ಲಿನ ಬಾರ್ ಗರ್ಲ್ ‘ಸಿಲ್ಕ್’ ಪಾತ್ರವು ಸ್ಮಿತಾ ಅವರ ಜೀವನವನ್ನು ಬದಲಾಯಿಸಿತು. ನಂತರ ದಕ್ಷಿಣ ಭಾರತದ ಸೌಂದರ್ಯ ರಾಣಿಯಾದ ಸ್ಮಿತಾ 1996 ರಲ್ಲಿ ತಮ್ಮ ಮೂವತ್ತಾರನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಈ ಸಾವಿಗೆ ನಿಜವಾದ ಕಾರಣ ಇಂದಿಗೂ ನಿಗೂಢವಾಗಿಯೇ ಉಳಿದಿದೆ. (ಏಜೆನ್ಸೀಸ್)