

Coolie : ಲೋಕೇಶ್ ಕನಗರಾಜ್ ನಿರ್ದೇಶನದ ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ "ಕೂಲಿ" ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ 300 ಕೋಟಿ ರೂಪಾಯಿ ಗಡಿ ದಾಟಿದೆ ಎಂದು ಸಿನಿ ಮೂಲಗಳು ವರದಿ ಮಾಡಿವೆ.
ಈ ವರ್ಷ 300 ಕೋಟಿ ರೂ. ಗಡಿ ದಾಟಿದ ಮೊದಲ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಕೂಲಿ ಸಿನಿಮಾ ಪಾತ್ರವಾಗಿ. ಈ ಚಿತ್ರ ತನ್ನ ಮೊದಲ ದಿನವೇ ಜಾಗತಿಕ ಮಾರುಕಟ್ಟೆಯಿಂದ 151 ಕೋಟಿ ರೂ. ಗಳಿಸಿದೆ.
ಈ ಚಿತ್ರವನ್ನು ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ವಿಶ್ವಾದ್ಯಂತದ ಅಂಕಿ-ಅಂಶಗಳ ಪ್ರಕಾರ, ಇದು ಮೂರನೇ ದಿನದಲ್ಲಿ 320 ಕೋಟಿ ರೂ. ಗಳಿಸಿದೆ. 300 ಕೋಟಿ ರೂ.ಗಳನ್ನು ವೇಗವಾಗಿ ಗಳಿಸಿದ ಚಿತ್ರವೆಂಬ ಹೆಸರು ಗಳಿಸಿದೆ. ವಿಜಯ್ ನಾಯಕನಾಗಿ ನಟಿಸಿದ ಮತ್ತು ಲೋಕೇಶ್ ಸ್ವತಃ ನಿರ್ದೇಶಿಸಿದ ಲಿಯೋ ಚಿತ್ರದ ದಾಖಲೆಯನ್ನು ಮುರಿದಿದೆ.
ಇನ್ನು ಕೂಲಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗೆ ಮುಂದುವರಿದರೆ ತಮಿಳು ಸಿನಿಮಾ ರಂಗದಲ್ಲಿ ಹೊಸ ದಾಖಲೆಯನ್ನು ಕೂಲಿ ಸಿನಿಮಾ ಬರೆಯಲಿದೆ.
ಕೂಲಿ ಸಿನಿಮಾದ ಪ್ರಮುಖ ಹೈಲೈಟ್ಸ್ ಏನೆಂದರೆ, ಅದರ ತಾರಾ ಬಳಗ. ರಜಿನಿಕಾಂತ್ ಮಾತ್ರವಲ್ಲದೇ ವಿವಿಧ ಚಿತ್ರರಂಗದ ಸೂಪರ್ ಸ್ಟಾರ್ಗಳ ದಂಡೇ ಈ ಸಿನಿಮಾದಲ್ಲಿದೆ. ಬಾಲಿವುಡ್ನಿಂದ ಆಮೀರ್ ಖಾನ್, ಟಾಲಿವುಡ್ನಿಂದ ನಾಗಾರ್ಜುನ್, ಸ್ಯಾಂಡಲ್ವುಡ್ನಿಂದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಮಾಲಿವುಡ್ನಿಂದ ಶೌಬಿನ್ ಶಾಹೀರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ, ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಕೂಡ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶ್ರುತಿ ಹಾಸನ್ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವಿಶೇಷ ಹಾಡೊಂದಕ್ಕೆ ನಟಿ ಪೂಜಾ ಹೆಗ್ಡೆ ಸೊಂಟ ಬಳುಕಿಸಿದ್ದಾರೆ. (ಏಜೆನ್ಸೀಸ್)