

ಇತ್ತೀಚಿನ ದಿನಗಳಲ್ಲಿ ಒಂದು ಟ್ರೆಂಡ್ ಶುರುವಾಗಿದೆ. ಒಂದು ಚಿತ್ರ ಚೆನ್ನಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಾಗ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ಆ ಚಿತ್ರವನ್ನು ನೋಡುವ ಆಸಕ್ತಿ ತೋರುತ್ತಿಲ್ಲ. ಅದೇ ಅಮೇಜಾನ್, ನೆಟ್ಫ್ಲಿಕ್ಸ್ ಮುಂತಾದ ಓಟಿಟಿ ಪ್ಲಾಟ್ಫಾಮರ್್ಗಳಿಗೆ ಬಂದಾಗ, ಜನ ಮುಗಿಬಿದ್ದು ನೋಡುವುದರ ಜೊತೆಗೆ ಆ ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೊಗಳಿ ಬರೆಯುತ್ತಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ‘ಗಂಟುಮೂಟೆ’ ಇದೇ ರೀತಿ ಆಯಿತು. ಈ ಸಾಲಿಗೆ ಹೊಸ ಸೇರ್ಪಡೆ ‘ಲವ್ ಮಾಕ್ಟೇಲ್’ಮತ್ತು ‘ದಿಯಾ’.
ಕಳೆದ ತಿಂಗಳು ಬಿಡುಗಡೆಯಾದ ಈ ಚಿತ್ರಗಳು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದವು. ಆದರೆ, ಚಿತ್ರಮಂದಿರಗಳತ್ತ ಜನ ಬರಲಿಲ್ಲ. ಈಗ ಅಮೇಜಾನ್ನಲ್ಲಿ ಆ ಚಿತ್ರಗಳನ್ನು ಜನ ನೋಡಿ, ಹಾಡಿ ಹೊಗಳುತ್ತಿದ್ದಾರೆ. ಇದು ಸಹ ಗೆಲುವೇ. ಆದರೆ, ಜನ ಮುಂಚೆಯೇ ಬಂದು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ಗೆಲ್ಲಿಸಿದ್ದರೆ, ಆ ಗೆಲುವು ಇನ್ನಷ್ಟು ಜನರಿಗೆ ಸ್ಪೂರ್ತಿಯಾಗುತಿತ್ತು.
ಈ ಬಗ್ಗೆ ಮಾತನಾಡುವ ‘ದಿಯಾ’ ನಿರ್ದೇಶಕ ಅಶೋಕ್, ‘ನಮ್ಮ ಸಿನಿಮಾದ ಕಂಟೆಂಟ್ ಬಹಳ ಚೆನ್ನಾಗಿತ್ತು. ನೋಡಿದವರೆಲ್ಲರೂ ಇದೊಂದು ಅದ್ಭುತ ಸಿನಿಮಾ ಎಂದರು. ಆದರೆ, ಕಲೆಕ್ಷನ್ ಆಗಲಿಲ್ಲ. ಈಗ ಅಮೇಜಾನ್ನಲ್ಲಿ ನೋಡಿದ ಮಂದಿ ಮೆಸೇಜ್ ಮಾಡುತ್ತಾರೆ ಮತ್ತು ಅದರ ಬಗ್ಗೆ ಬರೆಯುತ್ತಾರೆ. ಇದರಿಂದ ಸಿನಿಮಾ ರೀಚ್ ಆಗುತ್ತಿದೆಯಲ್ಲ ಎಂದು ಒಂದು ಖುಷಿಯಾದರೆ, ಬಾಕ್ಸ್ ಆಫೀಸ್ ರಿಪೋರ್ಟ್ ನೆನೆಸಿಕೊಂಡರೆ ಬೇಸರವಾಗುತ್ತದೆ. ನನ್ನ ಪ್ರಕಾರ ನನ್ನ ಚಿತ್ರದಲ್ಲಿ ವೈರಲ್ ಆಗುವಂತಹ ಅಂಶ ಏನು ಇರಲಿಲ್ಲ. ಅದಕ್ಕೆ ಚಿತ್ರ ಕಲೆಕ್ಷನ್ ಹೆಚ್ಚು ಮಾಡಲಿಲ್ಲ ಎನಿಸುತ್ತದೆ’ ಎನ್ನುತ್ತಾರೆ ಅವರು. ಇದು ‘ದಿಯಾ’ ಕಥೆಯಾದರೆ, ‘ಲವ್ ಮಾಕ್ಟೇಲ್’ ಚಿತ್ರದ್ದು ಇನ್ನೊಂದು ಕಥೆ. ಈ ಚಿತ್ರ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು, ಬಾಕ್ಸ್ ಆಫೀಸ್ನಲ್ಲಿಯೂ ಒಳ್ಳೆ ಕಲೆಕ್ಷನ್ ಮಾಡುತ್ತಿದೆ. ಜತೆಗೆ ಈ ವಾರದಿಂದ ಇನ್ನೂ ಒಂದಷ್ಟು ಥಿಯೇಟರ್ನಲ್ಲಿ ರಿಲೀಸ್ ಆಗಿದೆ. ಈ ಹೊತ್ತಿನಲ್ಲಿ ಅದು ಅಮೇಜಾನ್ನಲ್ಲಿ ಸ್ಟ್ರೀಮಿಂಗ್ ಆಗಿದೆ. ಆದರೆ, ಈ ಬಗ್ಗೆ ನಿರ್ದೇಶಕ ಕೃಷ್ಣ ಖುಷಿಯಿಂದ ಮಾತನಾಡುತ್ತಾರೆ.
‘ನಾನು ಸಿನಿಮಾವನ್ನು ಕೊಟ್ಟಿದ್ದು, ರಿಲೀಸ್ ಆದ ಆರನೇ ದಿನ. ಆಗ ನನ್ನ ಚಿತ್ರ ಒಂದೇ ಒಂದು ಚಿತ್ರಮಂದಿರಕ್ಕೆ ಬಂದು ನಿಂತಿತ್ತು. ನನಗೆ ಆಗ ಹಾಕಿದ ಬಂಡವಾಳ ರಿಕವರಿ ಆಗಬೇಕಿತ್ತು. ಹಾಗಾಗಿ ಕೊಟ್ಟೆ. ಅದಾಗಿ ಮುಂದಿನ ವಾರಕ್ಕೆ ಸಿನಿಮಾ ಉತ್ತಮವಾಗಿ ಟೇಕಾಫ್ ಆಗಿ ಕಲೆಕ್ಷನ್ ಸಹ ಚೆನ್ನಾಗಿ ಆಯಿತು. ಈಗ ಅಮೇಜಾನ್ಗೆ ಸಿನಿಮಾ ಬಂದಿದೆ. ನಾನು ಕೂಡಾ ಮತ್ತೆ ಚಿತ್ರವನ್ನು ಚಿತ್ರಮಂದಿರದಲ್ಲಿ ರಿಲೀಸ್ ಮಾಡುತ್ತಿದ್ದೇನೆ. ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲವಿದೆ’ ಎಂದು ನಗುತ್ತಾರೆ ಕೃಷ್ಣ.
ಅಮೇಜಾನ್ ನಂತಹ ಓಟಿಟಿ ಪ್ಲಾಟ್ ಫಾಮರ್್ಗಳಿಗೆ ಸಿನಿಮಾ ಕೊಡುವುದು, ನಿರ್ವಪಕರಿಗೆ ಒಂದು ರೀತಿಯಲ್ಲಿ ಅನುಕೂಲ. ನಿಗದಿ ಪಡಿಸಿದ ಹಣ ಸಿಗುವುದರ ಜತೆಗೆ ಸ್ಟ್ರೀಮಿಂಗ್ ಆಗುವುದರಿಂದ ಹೆಚ್ಚೆಚ್ಚು ಜನರಿಗೆ ರೀಚ್ ಆಗುತ್ತದೆ. | ಡಾರ್ಲಿಂಗ್ ಕೃಷ್ಣ ನಟ, ನಿರ್ದೇಶಕ