

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಒಟಿಟಿ ವೇದಿಕೆಗಳು ಮುಂಚೂಣಿಗೆ ಬಂದಾಗಿನಿಂದ ವೆಬ್ಸರಣಿಗಳ ಅಬ್ಬರವೂ ಜೋರಾಗಿದೆ. ಹಿಂದಿ, ತಮಿಳು, ತೆಲುಗು ಸೇರಿ ಬೇರೆ ಭಾಷೆಗಳಲ್ಲಿ ಸಾಲು ಸಾಲು ಸರಣಿಗಳು ಬರುತ್ತಿವೆ. ಆದರೆ, ಕನ್ನಡದಲ್ಲಿ ವೆಬ್ಸರಣಿಗಳು ಬರುತ್ತಿಲ್ಲ ಎಂಬ ಕೊರಗು ಮೊದಲಿನಿಂದಲೂ ಇತ್ತು. "ಹನಿಮೂನ್', "ಲವ್ ಯೂ ಅಭಿ' ಸೇರಿ ಕೆಲ ವೆಬ್ಸರಣಿಗಳು ಬಂದರೂ, ಬಳಿಕ ಪರಭಾಷೆಯ ಡಬ್ ಆಗಿರುವ ಸರಣಿಗಳೇ ಒಟಿಟಿಯಲ್ಲಿ ಹೆಚ್ಚು ಸದ್ದು ಮಾಡಿದವು. ಇದೀಗ ಕನ್ನಡಿಗರೆ ಸೇರಿ ಕನ್ನಡದ ವೆಬ್ಸರಣಿಯೊಂದನ್ನು ಮಾಡಿದ್ದಾರೆ. ಹೆಸರು "ಅಯ್ಯನ ಮನೆ'. ರಮೇಶ್ ಇಂದಿರ ನಿರ್ದೇಶನದ ಈ ಸರಣಿಯಲ್ಲಿ ಖುಷಿ ರವಿ, ಮಾನಸಿ ಸುಧೀರ್, ಅಕ್ಷಯ್, ಅನಿರುದ್ಧ್ ಆಚಾರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಮೊದಲ ವೆಬ್ಸರಣಿಯ ಬಗ್ಗೆ ನಾಯಕಿ ಖುಷಿ, "ನನಗೆ ಮೊದಲಿನಿಂದಲು ರಮೇಶ್ ಇಂದಿರ ಸರ್ ಕೆಲಸ ಮಾಡುವ ಆಸೆಯಿತ್ತು. ಅವರು ಒಳ್ಳೆ ನಿರ್ದೇಶಕ, ಬರಹಗಾರ, ನಟ ಕೂಡ. ಅವರು ಈ ಸರಣಿಯ ಬಗ್ಗೆ ಮೊದಲ ಬಾರಿ ಹೇಳಿದಾಗ, ಜನ ಸ್ವೀಕರಿಸುತ್ತಾರಾ? ಅಂತೆಲ್ಲ ಯೋಚನೆ ಇತ್ತು. ಎಲ್ಲದಕ್ಕೂ ರಮೇಶ್ ಸರ್ ಸ್ಪಷ್ಟನೆ ನೀಡಿದರು. ಖುಷಿಯಿಂದ ಒಪ್ಪಿಕೊಂಡೆ' ಎನ್ನುತ್ತಾರೆ.
ಖುಷಿ ಅವರಿಲ್ಲಿ ಚಿಕ್ಕಮಗಳೂರಿನಲ್ಲೇ ಹುಟ್ಟಿ, ಬೆಳೆದ ಹಳ್ಳಿಯ ಮುಗ್ಧ ಯುವತಿಯ ಪಾತ್ರದಲ್ಲಿ ನಟಿಸಿದ್ದು, "90ರ ದಶಕದಲ್ಲಿ ನಡೆಯುವ ಕಥೆಯಿದು. "ರಾಯರು ಬಂದರು ಮಾವನ ಮನೆಗೆ' ಸೇರಿ ಕೆಲ ಸಿನಿಮಾಗಳನ್ನು ನೋಡಿ, ಅಮ್ಮ, ಅಜ್ಜಿ ಮತ್ತು ಅತ್ತೆಯನ್ನು ಕೇಳಿ ಮಾಹಿತಿ ಪಡೆದು, ರಮೇಶ್ ಸರ್ ಜತೆ ಚರ್ಚಿಸಿ ಪಾತ್ರಕ್ಕೆ ರೆಡಿಯಾದೆ. ಹೀಗಾಗಿ ನಟಿಸುವಾಗ ನನಗೇನು ಕಷ್ಟವಾಗಲಿಲ್ಲ' ಎನ್ನುತ್ತಾರೆ. ತಲಾ 25ರಿಂದ 30 ನಿಮಿಷಗಳ, ಆರು ಸಂಚಿಕೆಗಳ ಈ ಸರಣಿ ನಾಳೆ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಜೀ5ನಲ್ಲಿ ರಿಲೀಸ್ ಆಗಲಿದ್ದು, ಉತ್ತಮ ಪ್ರತಿಕ್ರಿಯೆ ದೊರೆತರೆ ತಮಿಳು, ತೆಲುಗು ಸೇರಿ ಬೇರೆ ಭಾಷೆಗಳಲ್ಲೂ ಡಬ್ ಮಾಡುವ ಹಾಗೂ ಹೊಸ ಸೀಸನ್ ಆಲೋಚನೆಯೂ ಇದೆಯಂತೆ.
"ಸಿನಿಮಾನೇ ಮಾಡುತ್ತೇನೆ ಅಂತ ಕುಳಿತರೆ ಕಷ್ಟ' ಎನ್ನುವ ಖುಷಿ, "ನಯನತಾರಾ ಅವರಂತಹ ಲೇಡಿ ಸೂಪರ್ಸ್ಟಾರ್ ವೆಬ್ಸರಣಿ ಮಾಡುತ್ತಿದ್ದಾರೆ. ಹೀಗಿರುವಾಗ ನಾನು ಹೀರೋಯಿನ್, ಅದನ್ನು ಮಾಡಬಾರದು, ಇದನ್ನು ಮಾಡಬಾರದು ಅಂತ ಸುಮ್ಮನಿದ್ದರೆ ಹೇಗೆ? ಹೀಗಾಗಿಯೇ ಈಗಲೂ ನಾನು ಆಲ್ಬಂ ಸಾಂಗ್ಗಳಲ್ಲಿ ನಟಿಸುತ್ತಿದ್ದೇನೆ. ನನಗೇನು ಇಷ್ಟ? ಜನರು ನನ್ನಿಂದ ಏನು ನಿರೀಕ್ಷಿಸುತ್ತಾರೆ? ಅಂತ ನೋಡಿಕೊಂಡು ಕೆಲಸ ಮಾಡುತ್ತಿರಬೇಕು. "ಅಯ್ಯನ ಮನೆ' ನೋಡಿ ಬೇರೆ ಭಾಷೆಗಳಲ್ಲೂ ಅವಕಾಶ ಸಿಕ್ಕರೆ ನನಗೆ ಉತ್ತಮವಲ್ಲವೇ? ಜತೆಗೆ ಈ ಸರಣಿಯ ಬಳಿಕ ಮಿನಿಸಿರೀಸ್, ಮೈಕ್ರೋ ಸಿರೀಸ್, ಮೆಗಾ ಸಿರೀಸ್ ಅಂತೆಲ್ಲ ಕನ್ನಡದಲ್ಲೂ ಸರಣಿಗಳು ಹೆಚ್ಚುವ ನಿರೀಕ್ಷೆಯಿದೆ' ಎನ್ನುತ್ತಾರೆ.