

ಬೆಂಗಳೂರು: ‘ಕಳೆದ ನಾಲ್ಕು ವರ್ಷಗಳಿಂದ ಕೆಲಸ ಇಲ್ಲ. ಕಿಡ್ನಿ ಸಮಸ್ಯೆಯಿಂದ ತುಂಬ ನೋವು ಅನುಭವಿಸುತ್ತಿದ್ದೇನೆ. ಡಯಾಲಿಸಿಸ್ ಇಲ್ಲದೆ, ಔಷಧಿ ಕೊಟ್ಟು ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಐದು ದಿನಕ್ಕೊಂದು ಇಂಜೆಕ್ಷನ್ ಪಡೆಯಲೇಬೇಕು. ಒಂದಕ್ಕೆ ಎರಡೂವರೆ ಸಾವಿರ. ಜೀವನ ತುಂಬ ಕಷ್ಟ ಇದೆ. ದಾನಿಗಳು ಏನಾದರೂ ನೀಡುವುದಾದರೆ, ಖಂಡಿತಾ ಸ್ವೀಕರಿಸುತ್ತೇನೆ ...’ ಹೀಗೊಂದು ಮನವಿ ಮಾಡಿದ್ದಾರೆ ಹಿರಿಯ ನಿರ್ದೇಶಕ ಎಸ್ ಉಮೇಶ್.
ಸಂಕಲನಕಾರರಾಗಿ, ಸಹಾಯಕ ನಿರ್ದೇಶಕರಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಉಮೇಶ್, ಬಳಿಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದು 1988ರಲ್ಲಿ ತೆರೆಗೆ ಬಂದ ‘ಅವಳೇ ನನ್ ಹೆಂಡ್ತಿ’ ಚಿತ್ರದ ಮೂಲಕ. ಚಿತ್ರವೇನೋ ಸೂಪರ್ ಹಿಟ್ ಆಯಿತು. ಅದಾದ ಬಳಿಕ ಒಂದಷ್ಟು ಅವಕಾಶಗಳೂ ಅರಸಿ ಬಂದವು. ನಿರ್ವಣದಲ್ಲಿಯೂ ತೊಡಗಿಸಿಕೊಂಡರು. ಆದರೆ, ಲಾಭದ ಪ್ರಮಾಣಕ್ಕಿಂತ ನಷ್ಟವನ್ನೇ ಹೆಚ್ಚು ಅನುಭವಿಸಬೇಕಾಯಿತು. ಇತ್ತೀಚಿನ ಕೆಲ ವರ್ಷಗಳಿಂದಲೂ ಚಿತ್ರರಂಗದಲ್ಲಿ ಅವಕಾಶವಿಲ್ಲದೆ ಪರದಾಡುತ್ತಿದ್ದ ಉಮೇಶ್ ಅವರಿಗೆ, ಕಳೆದ ವರ್ಷ ಎಡ ಭಾಗದ ಕಿಡ್ನಿ ವೈಫಲ್ಯವಾಗಿ ಮತ್ತಷ್ಟು ಪ್ರಪಾತಕ್ಕೆ ನೂಕಿದೆ. ಸದ್ಯ ಕೈಯಲ್ಲಿ ಕಾಸಿಲ್ಲದೆ, ಕಿಡ್ನಿ ಸಮಸ್ಯೆಗೆ ತುತ್ತಾಗಿ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
ಭುವನಂ ಫೌಂಡೇಶನ್ ನೆರವು: ನಟ ಭುವನ್ ಪೊನ್ನಣ್ಣ ತಮ್ಮ ಭುವನಂ ಫೌಂಡೇಶನ್ ವತಿಯಿಂದ ಇಟ್ಟುಮಡುವಿನ ಉಮೇಶ್ ಅವರ ಮನೆಗೆ ತಬಲಾ ನಾಣಿ ಅವರೊಂದಿಗೆ ತೆರಳಿ ದಿನಸಿ ಕಿಟ್ ನೀಡಿ, ಹಣಕಾಸಿನ ನೆರವು ನೀಡಿದ್ದಾರೆ.