

ಬೆಂಗಳೂರು: ‘ಒಂದು ಸರಳ ಪ್ರೇಮ ಕಥೆ’ ಯಶಸ್ಸಿನ ಬಳಿಕ ನಿರ್ದೇಶಕ ಸಿಂಪಲ್ ಸುನಿ ಎರಡು-ಮೂರು ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಂಡಿದ್ದರು. ಅದರಲ್ಲಿ ‘ಮೋಡ ಕವಿದ ವಾತಾವರಣ’ ಒಂದು. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡವು ಒಂದು ಹಾಡಿನ ಚಿತ್ರೀಕರಣ ಬಾಕಿ ಇಟ್ಟುಕೊಂಡಿತ್ತು. ಇದೀಗ ಅದರ ಶೂಟಿಂಗ್ ಕೂಡ ಪೂರ್ಣಗೊಳಿಸಿದ್ದು, ತೆರೆಗೆ ಬರಲು ಸಿದ್ಧವಾಗುತ್ತಿದೆ. ಸೈಂಟಿಫಿಕ್ ಜತೆಗೆ ನವಿರಾದ ಪ್ರೇಮಕಥಾ ಹಂದರ ‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ಹೊಸ ಪ್ರತಿಭೆ ಶೀಲಮ್ ನಾಯಕನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇಲ್ಲಿ ಶೀಲಮ್ ಜತೆ ಮೋಕ್ಷಾ ಕುಶಾಲ್, ಸಾತ್ವಿಕಾ ಕಲಾ ಬಳಗದಲ್ಲಿದ್ದಾರೆ. ಸಿಂಪಲ್ ಸುನಿ, ‘‘ಒಂದು ಸರಳ ಪ್ರೇಮಕಥೆ’ ನನ್ನ ಜೀವನದ ಬೇರೆ ರೀತಿಯ ಸಿನಿಮಾ. ನನ್ನ ಲ್ೈಗೆ ಬೂಸ್ಟ್ ಕೊಟ್ಟ ಚಿತ್ರವದು. ಇದಾದ ಬಳಿಕ ನಾನು ‘ಮೋಡ ಕವಿದ ವಾತಾವರಣ’ ಕೈಗೆತ್ತಿಕೊಂಡಿದ್ದೇನೆ’ ಎಂದು ಮಾಹಿತಿ ನೀಡಿದರು. ಶೀಲಮ್, ‘‘ಗುರುಪೂರ್ಣಿಮಾ ದಿನ ಸುನಿ ಸರ್ ನನ್ನ ಲಾಂಚ್ ಮಾಡಿದ್ದಾರೆ. ಇದು ನನ್ನ ಅದೃಷ್ಟ. ಈ ಚಿತ್ರದಲ್ಲಿ ಕೆಲಸ ಮಾಡಿರುವ ಟೆಕ್ನಿಷಿಯನ್‌ಗಳು ದೊಡ್ಡ ಹೀರೋಗಳ ಜತೆ ಕೆಲಸ ಮಾಡಿದ್ದಾರೆ. ಹಾಗಾಗಿ, ಅವರ ಜತೆ ಕೆಲಸ ಮಾಡಿರುವುದು ಖುಷಿ ತಂದಿದೆ’ ಎಂದರು. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಜೂಡಾ ಸ್ಯಾಂಡಿ ಹಾಗೂ ಜೇಡ್ ಸಂಗೀತ, ಆದಿತ್ಯ ಕಶ್ಯಪ್ ಸಂಕಲನ ಚಿತ್ರಕ್ಕಿದೆ. ಇನ್ನು ಉಳಿದಂತೆ ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಚಿತ್ರೀಕರಣ ಪೂರ್ಣಗೊಳಿಸಿದ್ದು, ಇನ್ನೊಂದು ಚಿತ್ರ ‘ದ ಸ್ಟೋರಿ ಆಫ್ ರಾಯಗಢ’ ಶೂಟಿಂಗ್ ಹಂತದಲ್ಲಿದೆ.