

ಬೆಂಗಳೂರು: ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಶ್ರೀಕಾಂತ್ ಕಟಗಿ ಚೊಚ್ಚಲ ನಿರ್ದೇಶನದ ಚಿತ್ರ ‘ಕ್ಷೇತ್ರಪತಿ’. ಆಗಸ್ಟ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾದ ಈ ಜವಾರಿ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯಾಗಿದ್ದು, ರೈತರ ಕಷ್ಟದ ಕುರಿತು ಬೆಳಕು ಚೆಲ್ಲುವ, ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಸಿನಿಮಾ ಇದು.
ಕ್ರಿಟಿಕಲ್ ಆಗಿ ಮಾತ್ರವಲ್ಲದೇ ಕಮರ್ಷಿಯಲ್ಲಾಗಿಯೂ ಸದ್ದು ಮಾಡುತ್ತಿರುವ ‘ಕ್ಷೇತ್ರಪತಿ’ಗೆ ಉತ್ತರ ಕರ್ನಾಟಕದ ಗದಗ, ಕೊಪ್ಪಳ, ಹೊಸಪೇಟೆ, ಇಳಕಲ್, ಬೀದರ್, ಗುಲ್ಬರ್ಗಾ, ಬಾಗಲಕೋಟೆ ಸೇರಿ ಹಲವೆಡೆ ಭರ್ಜರಿ ಪ್ರತಿಕ್ರಿಯೆ ಬರುತ್ತಿದೆಯಂತೆ. ಅಷ್ಟೇ ಅಲ್ಲ, ಹೊರ ರಾಜ್ಯದಿಂದಲೂ ರಿಲೀಸ್‌ಗೆ ಬೇಡಿಕೆ ಬರುತ್ತಿದೆ ಎನ್ನುವ ನಿರ್ದೇಶಕ ಶ್ರೀಕಾಂತ್ ಕಟಗಿ, ‘ಉತ್ತರ ಕರ್ನಾಟಕದ ಜನರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಬೆಂಗಳೂರಿನ ಚಿತ್ರಮಂದಿರಗಳೂ ನಿನ್ನೆಯವರೆಗೂ ಶೇಕಡ 90ರಷ್ಟು ತುಂಬಿದೆ ಎಂದು ಕೇಳಿ ಖುಷಿಯಾಯಿತು. ಕೆಲವೆಡೆ ಶೋ ಹೆಚ್ಚಿಸಲು ಕರೆಗಳು ಬರುತ್ತಿವೆ. ಆಸ್ಟ್ರೇಲಿಯಾ ಕನ್ನಡ ಸಂಘದಿಂದ ಶೋ ನೀಡಲು ಬೇಡಿಕೆಯಿದೆ. ಜತೆಗೆ ಇಂದಿನಿಂದ ಮುಂಬೈ ಹಾಗೂ ಪುಣೆಯಲ್ಲಿ ‘ಕ್ಷೇತ್ರಪತಿ’ ರಿಲೀಸ್ ಆಗಲಿದೆ’ ಎಂದು ಹೇಳಿಕೊಳ್ಳುತ್ತಾರೆ.
ಮನಮುಟ್ಟುವ ಪ್ರತಿಕ್ರಿಯೆ:
ಈಗಾಗಲೆ ಸಿನಿಮಾಗೆ ಬಂದ ಪ್ರತಿಕ್ರಿಯೆ ಬಗ್ಗೆ ಶ್ರೀಕಾಂತ್, ‘ಇದು ನನ್ನ ಮೊದಲ ಸಿನಿಮಾ. ಉತ್ತಮ ರೆಸ್ಪಾನ್ಸ್ ಸಿಗುತ್ತಿರುವ ಖುಷಿ ಜತೆಗೆ ಒಂದೆರಡು ಪ್ರತಿಕ್ರಿಯೆ ನಾನು ಮರೆಯಲು ಸಾಧ್ಯವಿಲ್ಲ. ಕೆಲವರು ನಮ್ಮ ಚಿತ್ರವನ್ನು ‘ಬಂಗಾರದ ಮನುಷ್ಯ’ ಸಿನಿಮಾಗೆ ಹೋಲಿಸಿದರು. ಅಷ್ಟು ದೊಡ್ಡ ಸಿನಿಮಾಗೆ ಇದನ್ನು ಹೋಲಿಸಿದ್ದು ಸ್ವಲ್ಪ ಮುಜುಗರದ ಜತೆಗೆ ಹೆಮ್ಮೆಯೂ ಆಯಿತು. ಇನ್ನೊಂದಿಷ್ಟು ಸ್ವಿಗ್ಗಿ, ಜೊಮಾಟೊ ಡೆಲಿವರಿ ಹುಡುಗರು ಬಂದು ಭಾವುಕರಾಗಿ ಕೈ ಹಿಡಿದು ಕಣ್ಣೀರಿಟ್ಟರು. ಅದರಲ್ಲೂ ಒಬ್ಬರ ಮನೆಯಲ್ಲಿ ಇದೇ ರೀತಿಯ ಸನ್ನಿವೇಶ ಎದುರಾಗಿತ್ತಂತೆ. ಆತನ ತಂದೆ ಸಾಲದ ಹೊರೆಯನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದರಂತೆ. ಹೀಗಾಗಿ ಅವನು ಕೃಷಿಯನ್ನು, ಓದನ್ನು ಎಲ್ಲ ಬಿಟ್ಟು ಬೆಂಗಳೂರಿಗೆ ಬಂದು ಸ್ವಿಗ್ಗಿ ಡೆಲಿವರಿ ಕೆಲಸ ಮಾಡುತ್ತಿದ್ದಾನಂತೆ. ಜನರು ಈ ಚಿತ್ರಕ್ಕೆ ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತಿದ್ದಾರೆ. ಇದನ್ನು ಕಂಡಾಗ ಸಾರ್ಥಕತೆಯ ಭಾವ ಮೂಡುತ್ತದೆ’ ಎನ್ನುತ್ತಾರೆ. ಮಾತ್ರವಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಚಿತ್ರದ ಟ್ರೇಲರ್ ನೋಡಿದ್ದಾರೆ. ‘ಎಲ್ಲರೂ ಹೊಡೆದಾಟ, ರೌಡಿಸಂ ಸಿನಿಮಾಗಳ ಮೊರೆ ಹೊಗುತ್ತಿರುವಾಗ ಕೃಷಿ ಕುರಿತ ಹಾಗೂ ರೈತರ ಸಂಕಷ್ಟಗಳನ್ನು ತೋರಿಸುವಂಥ ಸಿನಿಮಾ ಮಾಡಿದ್ದು ಒಳ್ಳೆಯ ವಿಷಯ’ ಎಂದು ಸಂತೋಷ ವ್ಯಕ್ತಪಡಿಸಿದರು. ಚಿತ್ರವನ್ನು ನೋಡುವುದಾಗಿಯೂ ತಿಳಿಸಿದ್ದಾರೆ’ ಎಂದು ಹೇಳುತ್ತಾರೆ ಶ್ರೀಕಾಂತ್.