ಇಪ್ಪತ್ತರ ಯುವತಿಯ ಹುಡುಕಾಟದಲ್ಲಿ 'ರಾಮಾ ರಾಮಾ ರೇ' ಸತ್ಯ!

Janaki F
Published on

ಬೆಂಗಳೂರು: 'ರಾಮಾ ರಾಮಾ ರೇ' ಸಿನಿಮಾ ನಿರ್ದೇಶನದ ಮೂಲಕ ಖ್ಯಾತಿ ಪಡೆದಿರುವ ಪ್ರತಿಭಾವಂತ ನಿರ್ದೇಶಕ ಡಿ. ಸತ್ಯಪ್ರಕಾಶ್​ ಇದೀಗ ಇಪ್ಪತ್ತರ ಯುವತಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಹಾಗಂತ ಖುದ್ದು ಅವರೇ ಹೇಳಿಕೊಂಡಿದ್ದಾರೆ.

ಹೌದು.. ಅವರು ಹುಡುಕುತ್ತಿರುವ ಹುಡುಗಿ ಹೇಗಿರಬೇಕು ಎಂದು ಕೂಡ ಅವರು ವಿವರಣೆ ನೀಡಿದ್ದಾರೆ. ವಯಸ್ಸು 20ರಿಂದ 22ರ ವರ್ಷದೊಳಗಿರಬೇಕು, ಆಕೆಯ ಎತ್ತರ 5.5ರಿಂದ 5.8 ಅಡಿಯೊಳಗೆ ಇರಬೇಕು. ಜೊತೆಗೆ ಕನ್ನಡ ಮಾತನಾಡಲು ಬರುತ್ತಿರಬೇಕು ಎಂಬ ಷರತ್ತನ್ನೂ ಅವರು ಹಾಕಿದ್ದಾರೆ.

ಅಂದಹಾಗೆ ಅವರು ಹುಡುಗಿಯ ಹುಡುಕಾಟಕ್ಕಿಳಿದಿರುವುದು ಅವರ ಮುಂದಿನ ಸಿನಿಮಾಕ್ಕಾಗಿ. ಅಂದರೆ ಇನ್ನೂ ಚಿತ್ರದ ಶೀರ್ಷಿಕೆ ಬಿಡುಗಡೆಗೆ ಬಾಕಿ ಇರುವಾಗಲೇ ಅವರು ಚಿತ್ರದ ನಾಯಕಿಯ ಹೆಸರನ್ನು ಹೇಳಿದಂತಿದೆ. ಏಕೆಂದರೆ 'ಜಾನಕಿಗಾಗಿ ಹುಡುಕಾಟ' ಎಂಬ ಒಕ್ಕಣೆಯೊಂದಿಗೆ ಅವರು ಚಿತ್ರದ ನಾಯಕಿಯ ಪಾತ್ರಕ್ಕೆ ಹುಡುಕಾಟ ಆರಂಭಿಸಿದ್ದಾರೆ.

ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ, ಮ್ಯಾನ್​ ಆಫ್​ ದಿ ಮ್ಯಾಚ್ ಚಿತ್ರಗಳ ನಿರ್ದೇಶಕ ಡಿ. ಸತ್ಯಪ್ರಕಾಶ್ ಇದೀಗ ಹೊಸ ಸಿನಿಮಾವೊಂದಕ್ಕೆ ಕಥೆ ಬರೆದಿದ್ದು, ಅದನ್ನು ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದ ಟೈಟಲ್ ಸದ್ಯದಲ್ಲೇ ಲಾಂಚ್ ಆಗಲಿದ್ದು, ಚಿತ್ರಕ್ಕಾಗಿ ನಾಯಕಿಯ ಹುಡುಕಾಟವನ್ನು ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net