ಮಲ್ಟಿಪ್ಲೆಕ್ಸ್​ನಿಂದ ತೊಂದರೆ; ವಾಣಿಜ್ಯ ಮಂಡಳಿಗೆ ಜೋಗಿ ಪ್ರೇಮ್ ದೂರು

Prem
Published on

ಬೆಂಗಳೂರು: ‘ಜೋಗಿ’ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರವು ಫೆ. 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಪ್ರೇಮ್ ಸಿಟ್ಟಾಗಿದ್ದಾರೆ. ಅದೇ ಭರದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಹೋಗಿ ದೂರು ನೀಡಿದ್ದಾರೆ. ಇಷ್ಟಕ್ಕೂ ಪ್ರೇಮ್ ಯಾರ ಮೇಲೆ ಸಿಟ್ಟು ಎಂದರೆ, ಮಲ್ಟಿಪ್ಲೆಕ್ಸ್ ಮತ್ತು ಯುಎಫ್​ಒ- ಕ್ಯೂಬ್​ನವರತ್ತ ಅವರು ಬೆರಳು ತೋರಿಸುತ್ತಾರೆ.

ಈ ಕುರಿತು ಮಾತನಾಡಿರುವ ಅವರು, ‘ಸೌಂಡ್ ವಿಚಾರದಲ್ಲಿ ತುಂಬಾ ತೊಂದರೆಯಾಗುತ್ತಿದೆ. ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಸಿನಿಮಾಗಳಿಗೆ ಸೆವೆನ್ ಪಾಯಿಂಟ್ ಸೌಂಡ್​ನಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಆದರೆ, ಕನ್ನಡ ಸಿನಿಮಾಗಳನ್ನು ಫೋರ್ ಪಾಯಿಂಟ್​ನಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಸೌಂಡ್ ಕಡಿಮೆ ಮಾಡುವುದರಿಂದ ಸಿನಿಮಾಗೆ ಏಟುಬೀಳುತ್ತದೆ. ಸೌಂಡ್ ಸರಿ ಇಲ್ಲ ಎಂದರೆ ಪ್ರೇಕ್ಷಕರಿಗೆ ಕಿಕ್ ಸಿಗುವುದಿಲ್ಲ. ಈ ಹಿಂದೆ ನನ್ನ ‘ದಿ ವಿಲನ್’ ಚಿತ್ರಕ್ಕೂ ಇದೇ ಸಮಸ್ಯೆ ಆಗಿತ್ತು. ಈಗ ‘ಏಕ್ ಲವ್ ಯಾ’ಗೂ ಅದೇ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ದೂರು ನೀಡಿದ್ದೇನೆ’ ಎನ್ನುತ್ತಾರೆ ಅವರು.

ಇನ್ನು, ಚಿತ್ರವನ್ನು ಅಪ್​ಲೋಡ್ ಮಾಡುವ ಮತ್ತು ಚಿತ್ರಮಂದಿರಗಳಲ್ಲಿ ಪ್ರದರ್ಶನ ವ್ಯವಸ್ಥೆ ಮಾಡುವ ಸಂಸ್ಥೆಗಳಾದ ಯುಎಫ್​ಒ ಮತ್ತು ಕ್ಯೂಬ್​ಗಳ ಬಗ್ಗೆಯೂ ಬೇಸರವಿದೆ. ‘ಯುಎಫ್​ಒ ಮತ್ತು ಕ್ಯೂಬ್ ಸಂಸ್ಥೆಗಳ ಕಚೇರಿಗಳು ಬೆಂಗಳೂರು ಬಿಟ್ಟು ಎಲ್ಲ ನಗರಗಳಲ್ಲೂ ಇವೆ. ನಾವು ಚಿತ್ರವನ್ನು ಅಪ್​ಲೋಡ್ ಮಾಡಿಸಬೇಕೆಂದರೆ, ಚೆನ್ನೈಗೆ ಹೋಗಬೇಕು. ಅವರು ಚಿತ್ರವನ್ನು ಅಪ್​ಲೋಡ್ ಮಾಡುವುದಕ್ಕೆ ಸತಾಯಿಸುತ್ತಾರೆ. ಸಂಜೆವರೆಗೂ ಕಾಯಿಸುತ್ತಾರೆ. ಕರ್ನಾಟಕದಲ್ಲೇ ಯುಎಫ್​ಒ ಮತ್ತು ಕ್ಯೂಬ್ ಕಚೇರಿ ಇದ್ದರೆ, ನಾವು ಇಲ್ಲೇ ಅಪ್​ಲೋಡ್ ಮಾಡಿಸ ಬಹುದು. ಈ ಬಗ್ಗೆ ಮಂಡಳಿ ಗಮನ ಹರಿಸಬೇಕು’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net