

ಬೆಂಗಳೂರು: ಜೂ. ಎನ್ಟಿಆರ್ಗೆ ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ... ಕೆಲ ತಿಂಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹೀಗೊಂದು ಸುದ್ದಿ ಓಡಾಡುತ್ತಲೇ ಇತ್ತು. ಆದರೆ ಅಧಿಕೃತ ಘೋಷಣೆ ಮಾತ್ರ ಆಗಿರಲಿಲ್ಲ.
ಅದಾದ ಬಳಿಕ ತೆಲುಗಿನ ಖ್ಯಾತ ಚಿತ್ರನಿರ್ವಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ನಲ್ಲಿ ನೀಲ್ ನಿರ್ದೇಶನದ ಸಿನಿಮಾವೊಂದು ಬರಲಿದೆ ಎಂಬ ಸುದ್ದಿಯಾಗಿತ್ತು. ಇದೀಗ ಇನ್ನೇನು ಕೆಲ ದಿನಗಳಲ್ಲಿ ಬರ್ತ್ಡೇ ಆಚರಿಸಿಕೊಳ್ಳಲಿರುವ ಎನ್ಟಿಆರ್ ಬ್ರೇಕಿಂಗ್ ಸುದ್ದಿ ನೀಡಿದ್ದಾರೆ.
ಪ್ರಶಾಂತ್ ನೀಲ್ ಜತೆಗೆ ಸಿನಿಮಾ ಮಾಡುವುದನ್ನು ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿರುವ ಜೂ. ಎನ್ಟಿಆರ್, ‘ನೀಲ್ ಜತೆ ಸಿನಿಮಾ ಮಾಡಲಿದ್ದೇನೆ. ಆ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಲಿದೆ. ಮಾಸ್ ಆಕ್ಷನ್ ಶೈಲಿಯ ಸಿನಿಮಾ ಇದಾಗಿರಲಿದೆ’ ಎಂದಿದ್ದಾರೆ.
ಅಂದಹಾಗೆ, ಮೇ 20ಕ್ಕೆ ಜೂ. ಎನ್ಟಿಆರ್ ಜನ್ಮದಿನದಂದು ಈ ಚಿತ್ರದ ಅಧಿಕೃತ ಘೋಷಣೆ ಆಗಲಿದೆ. ಸದ್ಯ ರಾಜಮೌಳಿಯ ‘ಆರ್ಆರ್ಆರ್’ ಚಿತ್ರದಲ್ಲಿ ಎನ್ಟಿಆರ್ ನಟಿಸುತ್ತಿದ್ದು, ಅದು ಮುಗಿಯುತ್ತಿದ್ದಂತೆ ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.