ಫುಲ್ ಸ್ಪೀಡ್​ನಲ್ಲಿ ನಂದಕಿಶೋರ್; ಚಿತ್ರ ತಡವಾಗಿದ್ದು ನನ್ನಿಂದಲ್ಲ, ಮೇಕಿಂಗ್​ನಿಂದ..

Nanda Kishore
Published on

ಬೆಂಗಳೂರು: ‘100 ದಿನಗಳಲ್ಲಿ ಸಿನಿಮಾ ಕೊಡ್ತೀನಿ ಅಂತ ನಿರ್ಮಾಪಕರಿಗೆ ಹೇಳಿದ್ದೆ. ಈಗಾಗಲೇ 20 ದಿನಗಳಲ್ಲಿ ಚಿತ್ರದ ಶೇ. 80ರಷ್ಟು ಭಾಗ ಚಿತ್ರೀಕರಣ ಮುಗಿಸಿದ್ದೇನೆ. ಮುಂದಿನ 20 ದಿನಗಳಲ್ಲಿ ಚಿತ್ರೀಕರಣ ಸಂಪೂರ್ಣವಾಗುತ್ತದೆ ...’ ಹೀಗೆ ಹೇಳಿ ಒಮ್ಮೆ ನಕ್ಕರು ‘ಪೊಗರು’ ಖ್ಯಾತಿಯ ನಂದಕಿಶೋರ್. ಅವರು ಫುಲ್ ಸ್ಪೀಡ್​ನಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ನಿರ್ದೇಶಿಸುವುದಕ್ಕೆ ಮುಂದಾಗಿರುವ ನಂದಕಿಶೋರ್, ‘ರಾಣಾ’ ಮುಗಿಯುವುದಕ್ಕಿಂತ ಮುಂಚೆಯೇ, ವರಮಹಾಲಕ್ಷ್ಮೀ ಹಬ್ಬದ ದಿನದಂದು ಪ್ರಜ್ವಲ್ ಅಭಿನಯದ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಮುಗಿಸಿದ್ದಾರೆ. ಈ ಚಿತ್ರ ಪ್ರಾರಂಭವಾಗುವುದು ಜನವರಿಯಲ್ಲಂತೆ. ಅಷ್ಟರಲ್ಲಿ ಇನ್ನೂ ಎರಡು ಚಿತ್ರಗಳ ಚಿತ್ರೀಕರಣವನ್ನು ಮಾಡಿ ಮುಗಿಸುವ ವಿಶ್ವಾಸದಲ್ಲಿ ಅವರಿದ್ದಾರೆ.

ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ನಂದಕಿಶೋರ್, ‘ನಾನು ಚಿತ್ರರಂಗಕ್ಕೆ ಬಂದಿದ್ದು ಫಾಸ್ಟೆಸ್ಟ್ ನಿರ್ದೇಶಕ ಎಂಬ ಹೆಗ್ಗಳಿಕೆಯಿಂದ. ‘ವಿಕ್ಟರಿ’, ‘ಅಧ್ಯಕ್ಷ’ ಮುಂತಾದ ಚಿತ್ರಗಳನ್ನು ಬೇಗಬೇಗ ನಿರ್ದೇಶಿಸಿದ್ದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಾನು ಚಿತ್ರ ನಿಧಾನ ಮಾಡುತ್ತೀನಿ ಎಂಬ ದೂರಿತ್ತು. ಚಿತ್ರ ತಡವಾಗಿದ್ದು ನನ್ನಿಂದಲ್ಲ, ಮೇಕಿಂಗ್​ನಿಂದ. ಇಷ್ಟು ದಿನಗಳಲ್ಲಿ ನಾನು ಅರ್ಥ ಮಾಡಿಕೊಂಡಿದ್ದೇನೆಂದರೆ, ಕಥೆ ಮತ್ತು ಮೇಕಿಂಗ್ ಎಷ್ಟು ಮುಖ್ಯವೋ, ಸಮಯ ಸಹ ಬಹಳ ಮುಖ್ಯ. ನಾವು ಒಂದು ಚಿತ್ರವನ್ನು 2 ವರ್ಷ ಮಾಡುವುದು ಮುಖ್ಯವಲ್ಲ. ಅಷ್ಟು ಸಮಯ ಹಾಕಿದಾಗ ಅದ್ಭುತ ಆದರೆ ಪರವಾಗಿಲ್ಲ. ಒಂದು ಕಮರ್ಷಿಯಲ್ ಚಿತ್ರ ಮಾಡುವುದಕ್ಕೆ ಅಷ್ಟು ಸಮಯ ಯಾಕೆ? ಇದರಿಂದ ನಿರ್ವಪಕರಿಗೆ ತೊಂದರೆಯಾಗುತ್ತದೆ. ಹಾಗಂತ ಸುಮ್ಮನೆ ಏನೋ ಮಾಡುತ್ತಿಲ್ಲ. ಡಬ್ಬಲ್ ಡ್ಯೂಟಿ ಮಾಡುತ್ತಿದ್ದೇನೆ. ಸರಿಯಾಗಿ ನಿದ್ದೆ ಮಾಡುವುದಕ್ಕೆ ಆಗುತ್ತಿಲ್ಲ್ಲ ಎನ್ನುತ್ತಾರೆ ಅವರು. ‘ರಾಣಾ’ ಮುಗಿಯುತ್ತಿದ್ದಂತೆಯೇ, ಶಿವರಾಜಕುಮಾರ್ ಅಭಿನಯದ ಹೊಸ ಚಿತ್ರವನ್ನು ಸೆಪ್ಟೆಂಬರ್​ನಲ್ಲಿ ಕೈಗೆತ್ತಿಕೊಳ್ಳಲಿದ್ದಾರಂತೆ ನಂದಕಿಶೋರ್. ಅದು ಮುಗಿಯುತ್ತಿದ್ದಂತೆಯೇ ಬಿ.ಸಿ. ಪಾಟೀಲ್ ನಿರ್ವಣದ ಇನ್ನೊಂದು ಚಿತ್ರವನ್ನು ಅವರು ನಿರ್ದೇಶಿಸಲಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net