ಮಿಸ್ಕಿನ್ ‘ಸೈಕೋ’ ಹೇಳಿಕೆ: ಇಳಯರಾಜರಿಂದ ಕುಡಿಯುವವರು ಹೆಚ್ಚಾಗಿದ್ದಾರೆ ಎಂದ ತಮಿಳು ನಿರ್ದೇಶಕ

misku 1
Published on

ತಮಿಳಿನ ‘ಅಂಜತೆ’, ‘ತುಪ್ಪರಿವಾಲನ್’, ‘ಸೈಕೋ’ ಸೇರಿ 10ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿರುವ ಮಿಸ್ಕಿನ್, ಸಿನಿಮಾಗಳಿಗಿಂತ ವಿವಾದಾತ್ಮಕ ಹೇಳಿಕೆಗಳಿಂದಲೇ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈ ಹಿಂದೆ ‘ತುಪ್ಪರಿವಾಲನ್’ ಚಿತ್ರದ ಪ್ರಚಾರ ವೇಳೆ ‘ಆರ್. ಮಾಧವನ್ ಮುಖ ನೋಡಿದರೆ, 100 ಸಿಗರೇಟ್ ಸೇದಿದವರಂತೆ ಕಾಣುತ್ತಾರೆ’ ಎಂದು ನಟನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ, ಟೀಕೆಗೆ ಗುರಿಯಾಗಿದ್ದರು. ಹಾಗೇ ‘ಕೊಟ್ಟುಕಾಲಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ‘ಪ್ರೇಕ್ಷಕರು ಈ ಸಿನಿಮಾ ನೋಡದಿದ್ದರೆ, ನಗ್ನವಾಗಿ ನಿಲ್ಲುತ್ತೇನೆ’ ಎಂದು ಹೇಳಿ, ಹಲವರ ಹುಬ್ಬೇರುವಂತೆ ಮಾಡಿದ್ದರು. ಇದೀಗ ಮದ್ಯ ಸೇವನೆ ಬಗ್ಗೆ ಮಾತನಾಡಿ, ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ. ಮಿಸ್ಕಿನ್ ಇತ್ತೀಚೆಗೆ ತಮಿಳಿನ ‘ಬಾಟಲ್ ರಾಧಾ’ ಚಿತ್ರದ ಧ್ವನಿ ಸುರುಳಿ ಬಿಡುಗಡೆಯಲ್ಲಿ ಭಾಗವಹಿಸಿದ್ದ ಅವರು, ‘ತೀವ್ರ ದುಃಖದಲ್ಲಿರುವವರು ಮದ್ಯ ವ್ಯಸನಕ್ಕೆ ಗುರಿಯಾಗುತ್ತಾರೆ. ಆದರೆ, ನಾನು ನಾನೇ. ನಾನು ಕೂಡ ವಿಪರೀತ ಕುಡಿಯುತ್ತೇನೆ. ಅಂತೆಯೇ ನನಗೆ ಜೀವನದಲ್ಲಿ ನಂಬಿಕೆಯಿದೆ. ಈ ಮಧ್ಯೆ, ನನಗೆ ಸಿನಿಮಾ ಹಾಗೂ ಅಕಿರಾ ಕುರುಸೋವಾನ ಮೇಲೆ ವ್ಯಾಮೋಹ ಜಾಸ್ತಿ. ಮದ್ಯಕ್ಕಿಂತ ಹೆಚ್ಚು ಕಿಕ್ ನನಗೆ ಸಿನಿಮಾದಲ್ಲಿ ಸಿಗುತ್ತದೆ. ಆದರೆ, ನನ್ನನ್ನು ಅತಿಹೆಚ್ಚು ವ್ಯಸನಿಯಾಗಿಸಿರುವುದು ಇಳಯರಾಜಾ ಸಂಗೀತ. ಸಂಗೀತ ನಿರ್ದೇಶಕ ಇಳಯರಾಜ ಅವರ ಹಾಡುಗಳಿಂದ ನಮ್ಮಂತಹ ಮದ್ಯವ್ಯಸನಿಗಳು ಹೆಚ್ಚಾಗಿದ್ದಾರೆ’ ಎಂದಿದ್ದಾರೆ. ಅವರ ಈ ಹೇಳಿಕೆಯ ವಿರುದ್ಧ ‘ತಮ್ಮ ಚಟಕ್ಕಾಗಿ ದೊಡ್ಡವರ ಹೆಸರು ಎಳೆದು ತರುವುದೇಕೆ’ ಎಂದು ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಮಿಸ್ಕಿನ್, ‘ಪಿಸಾಸು 2’, ‘ಟ್ರೇನ್’ ಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net