ಟಾಕಿ ಮುಗಿಸಿದ ಬಾಘಿ 4 ; ಕನ್ನಡಿಗ ಎ. ಹರ್ಷ ನಿರ್ದೇಶಿಸುತ್ತಿರುವ ಬಾಲಿವುಡ್ ಸಿನಿಮಾ

jhhjv
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಭಜರಂಗಿ' ಸರಣಿ, "ಚಿಂಗಾರಿ', "ಅಂಜನಿಪುತ್ರ', "ವಜ್ರಕಾಯ', "ವೇದ' ಸೇರಿ ಹಲವು ಹಿಟ್​ ಚಿತ್ರಗಳಿಗೆ ಆ್ಯಕ್ಷನ್​-ಕಟ್​ ಹೇಳಿರುವ ಖ್ಯಾತಿ ನಿರ್ದೇಶಕ ಎ. ಹರ್ಷಗೆ ಸಲ್ಲುತ್ತದೆ. ಇಂತಹ ಹರ್ಷ ಕಳೆದ ವರ್ಷ ತೆರೆಗೆ ಬಂದ, ಗೋಪಿಚಂದ್​ ನಾಯಕನಾಗಿದ್ದ "ಭೀಮ' ಮೂಲಕ ತೆಲುಗು ಚಿತ್ರರಂಗಕ್ಕೆ ಹಾರಿದ್ದರು. ಅದರ ಬೆನ್ನಲ್ಲೇ "ಬಾಘಿ 4' ಮೂಲಕ ಬಾಲಿವುಡ್​ನತ್ತ ಮುಖ ಮಾಡಿದ್ದ ಅವರು, ಸದ್ದಿಲ್ಲದೇ ಮೊದಲ ಹಿಂದಿ ಚಿತ್ರದ ಮಾತಿನ ಭಾಗದ ಶೂಟಿಂಗ್​ ಪೂರ್ಣಗೊಳಿಸಿದ್ದಾರೆ.

2016ರಲ್ಲಿ "ಬಾಘಿ', 2018ರಲ್ಲಿ "ಬಾಘಿ 2' ಹಾಗೂ 2020ರಲ್ಲಿ "ಬಾಘಿ 3' ಚಿತ್ರಗಳು ರಿಲೀಸ್​ ಆಗಿದ್ದವು. ಮೊದಲ ಚಿತ್ರವನ್ನು ಶಬ್ಬೀರ್​ ಖಾನ್​ ಮತ್ತು ನಂತರದ ಎರಡು ಸಿನಿಮಾಗಳನ್ನು ಅಹ್ಮದ್​ ಖಾನ್​ ನಿರ್ದೇಶಿಸಿದ್ದರು. ಎ. ಹರ್ಷ ನಿರ್ದೇಶನದ ಕನ್ನಡ ಸಿನಿಮಾಗಳನ್ನು ನೋಡಿ ಇಂಪ್ರೆಸ್​ ಆಗಿದ್ದ ನಿರ್ಮಾಪಕ ಸಾಜಿದ್​ ನಡಿಯಾಡ್ವಾಲಾ, "ಬಾಘಿ 4' ನಿರ್ದೇಶಿಸಲು ಅವರಿಗೆ ಅವಕಾಶ ನೀಡಿದ್ದಾರೆ.

ಎ. ಹರ್ಷ ಜತೆಗೆ ಛಾಯಾಗ್ರಾಹಕ ಸ್ವಾಮಿ ಜೆ. ಗೌಡ, ಸಹ ಛಾಯಾಗ್ರಾಹಕ ಕರ್ಣ ಮತ್ತು ಸಂಕಲನಕಾರ ಕಿರಣ್​ ಕೂಡ "ಬಾಘಿ 4' ಮೂಲಕ ಬಾಲಿವುಡ್​ ಪದಾರ್ಪಣೆ ಮಾಡುತ್ತಿದ್ದಾರೆ. ವಿಶೇಷ ಅಂದರೆ ಈ ಹಿಂದೆ ಎ. ಹರ್ಷ ಚಿತ್ರಗಳಲ್ಲಿ ಆನ್​ಲೈನ್​, ಟೀಸರ್​ ಮತ್ತು ಟ್ರೇಲರ್​ ಸಂಕಲನ ಮಾಡಿದ್ದ ಕಿರಣ್​, "ಬಾಘಿ 4' ಮೂಲಕ ಸಂಕಲನಕಾರನಾಗಿ ಭಡ್ತಿ ಪಡೆದಿದ್ದಾರೆ. ಸರಣಿಯ ಮೂರು ಚಿತ್ರಗಳಲ್ಲಿ ನಾಯಕನಾಗಿದ್ದ ಟೈಗರ್​ ಶ್ರಾಫ್​ ಅವರೇ ಈ ನಾಲ್ಕನೇ ಸಿನಿಮಾದಲ್ಲೂ ನಾಯಕನಾಗಿ ಮುಂದುವರಿದಿದ್ದು, ಅವರಿಗೆ ಸೋನಮ್​ ಬಾಜ್ವಾ ಮತ್ತು ಹರ್ನಾಜ್​ ಸಂಧು ನಾಯಕಿಯಾಗಿದ್ದಾರೆ. ಜತೆಗೆ ಸಂಜಯ್​ ದತ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ಬಾಘಿ 4' ಇದೇ ಸೆ. 5ರಂದು ತೆರೆಗೆ ಬರಲಿದೆ.

ಬಾಘಿ 4 ಬಗ್ಗೆ ವಿಜಯವಾಣಿಗೆ ಮಾಹಿತಿ ನೀಡಿದ ಹರ್ಷ, ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನು ನಾಲ್ಕು ಹಾಡುಗಳ ಶೂಟಿಂಗ್​ ಮತ್ತು ಕೆಲ ಪ್ಯಾಚ್​ ವರ್ಕ್​ ಮಾತ್ರ ಬಾಕಿಯಿದೆ. ಈಗಲೂ ನಾನು ಶೂಟಿಂಗ್​ನಲ್ಲಿ ಬಿಜಿಯಿದ್ದೇನೆ. ಈ ಹಿಂದೆ ಘೋಷಿಸಿರುವಂತೆ ಸೆ. 5ರಂದು ಸಿನಿಮಾ ರಿಲೀಸ್​ ಮಾಡುವ ಉದ್ದೇಶದಿಂದಲೇ ಕೆಲಸ ಮಾಡುತ್ತಿದ್ದೇವೆ. ಎಂದು ಹೇಳಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net