

ಕೆಲವೇ ದಿನಗಳ ಹಿಂದಿನ ಮಾತು. ಚಲನಚಿತ್ರಗಳನ್ನು ಚಿತ್ರಮಂದಿರಗಳ ಬದಲಾಗಿ ಓವರ್ ದಿ ಟಾಪ್ (ಓಟಿಟಿ)ನಲ್ಲಿ ಬಿಡುಗಡೆ ಮಾಡಿದರೆ, ಜನ ಚಿತ್ರಮಂದಿರಕ್ಕೆ ಬರುವುದಿಲ್ಲ, ಅದರಿಂದ ಚಿತ್ರಮಂದಿರ ಮುಚ್ಚಬೇಕಾಗುತ್ತದೆ ಎಂಬಂತಹ ಅಭಿಪ್ರಾಯಗಳು ಕೇಳಿ ಬಂದಿದ್ದವು. ಅದಕ್ಕೆ ಸರಿಯಾಗಿ ಮೂರು ತಿಂಗಳ ಅಂತರದಲ್ಲಿ 15ಕ್ಕೂ ಹೆಚ್ಚು ಹೊಸ ಚಿತ್ರಗಳು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗುತ್ತವೆ ಎಂದು ಸುದ್ದಿಯಾಯಿತು.
ಈಗಾಗಲೇ ಅಮಿತಾಭ್ ಬಚ್ಚನ್ ಅಭಿನಯದ ಗುಲಾಬೋ ಸಿತಾಬೋ, ಜ್ಯೋತಿಕಾ ಅಭಿನಯದ ಪೊನ್ಮಗಳ್ ವಂದಾಳ್ ಮತ್ತು ಕೀರ್ತಿ ಸುರೇಶ್ ಅಭಿನಯದ ಪೆಂಗ್ವಿನ್ ಚಿತ್ರಗಳು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿವೆ. ಆದರೆ, ಈ ಮೂರೂ ಚಿತ್ರಗಳಿಗೆ ಸಿಕ್ಕ ಪ್ರತಿಕ್ರಿಯೆ ಅಷ್ಟೇನೂ ಸಕಾರಾತ್ಮಕವಾಗಿಲ್ಲ ಎಂದು ಹೇಳಲಾಗುತ್ತಿದೆ. ಬರೀ ಮೂರು ಚಿತ್ರಗಳಷ್ಟೇ ಅಲ್ಲ, ಬೇರೆ ಬೇರೆ ಓಟಿಟಿಗಳಲ್ಲಿ ಬಿಡುಗಡೆಯಾಗಿರುವ ಗೂಮ್ಕೇತು, ಚೋಕ್ಡ್, ಮಿಸಸ್ ಸೀರಿಯಲ್ ಕಿಲ್ಲರ್, ಅತೀತ್, ವಾಟ್ ಆರ್ ದಿ ಆಡ್ಸ್ ಮುಂತಾದ ಯಾವ ಚಿತ್ರಗಳಿಗೂ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿಲ್ಲ. ಆವರೇಜ್ ಎಂಬರ್ಥದಲ್ಲೇ ವಿಮರ್ಶೆಗಳು ಬರುತ್ತಿವೆ. ಕೆಲವು ಜನಪ್ರಿಯ ಓಟಿಟಿಗಳಲ್ಲಿ ಬಿಡುಗಡೆಯಾದ ಚಿತ್ರಗಳ ಬಗ್ಗೆ ನಾಲ್ಕು ಜನರಿಗಾದರೂ ಗೊತ್ತಿದೆ. ಇನ್ನು ಕೆಲವು ಓಟಿಟಿಯಲ್ಲಿ ಯಾವ್ಯಾವ ಚಿತ್ರ ಬಿಡುಗಡೆಯಾಗಿದೆ ಎಂಬ ವಿಷಯವೇ ಎಷ್ಟೋ ಜನರಿಗೆ ಗೊತ್ತಿಲ್ಲ.
ಇನ್ನು ಈ ಚಿತ್ರಗಳನ್ನು ಎಷ್ಟು ಜನ ನೋಡಿದ್ದಾರೆ ಎಂಬ ವಿಷಯ ಎಲ್ಲೂ ಬಹಿರಂಗವಾಗಿಲ್ಲ. ಓಟಿಟಿ ಸಂಸ್ಥೆಗಳು ಯಾವತ್ತೂ ಯಾವ ಚಿತ್ರದ ಅಂಕಿ-ಅಂಶಗಳನ್ನೂ ಅಧಿಕೃತವಾಗಿ ನೀಡುವುದಿಲ್ಲವಾದ್ದರಿಂದ, ತಮ್ಮ ಚಿತ್ರ ಇಷ್ಟು ಜನರಿಗೆ ತಲುಪಿದೆ ಎಂದು ಯಾರಿಗೂ ನಿರ್ಧಿಷ್ಟವಾಗಿ ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಳೆದ ಮೂರು ತಿಂಗಳುಗಳಲ್ಲಿ ಓಟಿಟಿಯಲ್ಲಿ ಬಿಡುಗಡೆಯಾದ ಎಷ್ಟು ಚಿತ್ರಗಳು ಗೆದ್ದಿವೆ, ಎಷ್ಟು ಸೋತಿವೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ಇನ್ನು ಇದೆಲ್ಲದರಿಂದ ಚಿತ್ರಮಂದಿರ ನಡೆಸುತ್ತಿರುವುವರು ನಿಟ್ಟುಸಿರುಬಿಡುತ್ತಿದ್ದಾರೆ. ಏಕೆಂದರೆ, ಓಟಿಟಿಯಲ್ಲಿ ಚಿತ್ರಗಳು ನೇರವಾಗಿ ಬಿಡುಗಡೆಯಾದರೆ, ಜನ ಅದಕ್ಕೇ ಅಂಟಿಕೊಳ್ಳುತ್ತಾರೆ ಮತ್ತು ಇದು ಅಭ್ಯಾಸವಾಗಿಬಿಟ್ಟರೆ ಚಿತ್ರಮಂದಿರಕ್ಕೆ ಬರುವುದಿಲ್ಲ ಎಂಬ ಕಲ್ಪನೆ ಎಲ್ಲರಲ್ಲೂ ದೊಡ್ಡದಾಗಿತ್ತು. ಅದೇ ಕಾರಣಕ್ಕೆ ತಮಿಳುನಾಡಿನಲ್ಲಿ ಈ ಕುರಿತು ಮೊದಲ ಪ್ರತಿಭಟನೆಗಳಾದವು. ಜ್ಯೋತಿಕಾ ಅಭಿನಯದ ಪೊನ್ಮಗಳ್ ವಂದಾಳ್ ಚಿತ್ರವು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾದರೆ, ಇನ್ನು ಮುಂದೆ ಜ್ಯೋತಿಕಾ ಮತ್ತು ಅವರ ಪತಿ ಸೂರ್ಯ ಅವರ ಚಿತ್ರಗಳನ್ನು ಬಹಿಷ್ಕರಿಸುವುದಾಗಿ ಚಿತ್ರಮಂದಿರ ನಡೆಸುತ್ತಿರುವವರು ಆಗ್ರಹಿಸಿದ್ದರು. ಅದರ ನಡುವೆಯೂ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಯ್ತು.
ಈಗ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ, ಚಿತ್ರಮಂದಿರದವರು ಸ್ವಲ್ಪ ನಿರಾಳವಾಗಿದ್ದಾರೆ. ಓಟಿಟಿಯಲ್ಲಿ ಚಿತ್ರ ನೇರವಾಗಿ ಬಿಡುಗಡೆಯಾದರೂ, ಅದರಿಂದ ಚಿತ್ರಮಂದಿರಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಕರೊನಾ ಸಮಸ್ಯೆ ಬಗೆಹರಿದು, ಮುಂದೊಂದು ದಿನ ಚಿತ್ರಮಂದಿರಗಳು ಪ್ರದರ್ಶನ ಶುರು ಮಾಡಿದ ಮೇಲೆ ಜನ ಮತ್ತೆ ಚಿತ್ರಮಂದಿರಕ್ಕೆ ಬಂದು ನೋಡುತ್ತಾರೆ ಎಂಬ ನಂಬಿಕೆ, ಇತ್ತೀಚಿನ ಬೆಳವಣಿಗೆಗಳಿಂದ ಹೆಚ್ಚಾಗಿದೆ.
ಈಗ ಎಲ್ಲಾ ಭಾಷೆಯ ಚಿತ್ರರಂಗಗಳಲ್ಲೂ ಇನ್ನೊಂದು ಹೊಸ ಚರ್ಚೆ ಶುರುವಾಗಿದೆ. ಅದೇನೆಂದರೆ, ಓಟಿಟಿಯಲ್ಲಿ ನೇರವಾಗಿ ಬಿಡುಗಡೆ ಮಾಡುವುದು ಲಾಭವೋ, ನಷ್ಟವೋ ಎಂದು. ಈ ಪ್ರಶ್ನೆಗೆ ಈಗಲೇ ಉತ್ತರಿಸುವುದು ಕಷ್ಟ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳ ಬಿಡುಗಡೆ ನೋಡಿಕೊಂಡು, ಒಂದು ತೀರ್ಮಾನಕ್ಕೆ ಬರಬಹುದೇನೋ?