

ಬೆಂಗಳೂರು: ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ದಿಲೀಪ್ ರಾಜ್ ಈಗ ಕಿರುತೆರೆಯಲ್ಲಿ ಸಖತ್ ಬಿಜಿಯಾಗಿದ್ದಾರೆ. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯನ್ನು ನಿರ್ಮಿಸುವುದರ ಜತೆಗೆ, ಅದರಲ್ಲಿ ಎಜೆ ಎಂಬ ಪಾತ್ರದ ಮೂಲಕ ಮೆಚ್ಚುಗೆ ಪಡೆದಿರುವ ಅವರು, ಇದೀಗ 'ಮಹಾನ್ ಕಲಾವಿದ' ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ.
ಈ ಚಿತ್ರದಲ್ಲಿ ದಿಲೀಪ್ ಬರೀ ನಟಿಸುತ್ತಿಲ್ಲ, ನಾಯಕನಾಗಿ ನಟಿಸುತ್ತಿದ್ದಾರೆ. ಹಿರಿಯ ಪತ್ರಕರ್ತರಾದ ದಿ.ಸುರೇಶ್ಚಂದ್ರ ಪುತ್ರ ಅಭಯ್ ಚಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಇವರ ಎರಡನೇ ನಿರ್ದೇಶನದ ಚಿತ್ರ. ಸಂಗೀತ ನಿರ್ದೇಶನ ಕೂಡ ಅಭಯ್ ಚಂದ್ರ ಅವರದೇ.
'ಮಹಾನ್ ಕಲಾವಿದ' ಚಿತ್ರದ ಕುರಿತು ಮಾತನಾಡುವ ಅಭಯ್, 'ಇದು ನನ್ನ ಎರಡನೇ ಚಿತ್ರ. ಈ ಕಥೆಯನ್ನು ಸಿದ್ದಪಡಿಸಿಕೊಂಡು 'ಕಲಾವಿದ' ಅಂತ ಶೀರ್ಷಿಕೆಯಿಟ್ಟಿದ್ದೆ. ಈ ವಿಷಯವನ್ನು ರವಿಚಂದ್ರನ್ ಅವರಿಗೆ ತಿಳಿಸಿದೆ. ಧಾರಾಳವಾಗಿ ಈ ಶೀರ್ಷಿಕೆ ಇಡು. ಆದರೆ, ಬರೀ 'ಕಲಾವಿದ' ಅಂತ ಬೇಡ. ಏನಾದರೂ ಸೇರಿಸು ಅಂದರು. ನಾನು 'ಮಹಾನ್ ಕಲಾವಿದ' ಅಂತ ಇಟ್ಟೆ. ಕಲಾವಿದನೊಬ್ಬನ ಬದುಕು ಬವಣೆಗಳನ್ನು ತೋರಿಸುವ ಕಥಾಹಂದರ ಹೊಂದಿರುವ ಚಿತ್ರವಿದು. ನಾನು ಈ ಪಾತ್ರ ಬರೆಯಬೇಕಾದರೆ ದಿಲೀಪ್ ರಾಜ್ ಈ ಪಾತ್ರಕ್ಕೆ ಸೂಕ್ತ ಎಂದು ಕೊಂಡಿದ್ದೆ. ಅವರೇ ಈ ಚಿತ್ರದ ನಾಯಕರಾದರು. ಜಾಹ್ನವಿ ರಾಯಲ ಹಾಗೂ ಪಲ್ಲವಿ ರಾಜು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ' ಎಂದು ಹೇಳಿದರು.
ಲಾಕ್ಡೌನ್ ಸಮಯದಲ್ಲಿ ಆನ್ ಲೈನ್ನಲ್ಲಿ ಸಿಕ್ಕ ಅಭಯ್ ಅವರ ಗೆಳೆಯ ಭರತ್ ಬಿ ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಿರಣ್ ಗಜ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ.
ಬಹಳ ದಿನಗಳ ನಂತರ ಮತ್ತೆ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ ಎಂದೇ ಮಾತು ಶುರು ಮಾಡಿದ ದಿಲೀಪ್, 'ಕಲಾವಿದ ಮಾಡುವ ನಟನೆ ಮೊದಲು ನಿರ್ದೇಶಕರಿಗೆ ಮೆಚ್ಚುಗೆಯಾಗಬೇಕು. ನನ್ನ ನಟನೆ ಬಗ್ಗೆ ಮೊದಲು ಅಭಯ್ ಹೇಳಬೇಕು. ನಾನು ಸಹ ಈ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿರುವುದಾಗಿ' ಹೇಳಿದರು.