ದಿಲ್ ಸೇಗೆ ಪವರ್​ಫುಲ್ ಮುಹೂರ್ತ

NB 4
Published on

ಬೆಂಗಳೂರು: ‘ದಿಲ್ ಸೇ’ ಎಂದಾಕ್ಷಣ ಮಣಿರತ್ನಂ ನಿರ್ದೇಶನ ಹಾಗೂ ಶಾರುಖ್ ಖಾನ್ ಅಭಿನಯದ ಹಿಂದಿ ಸಿನಿಮಾ ನೆನಪಾಗುವುದು ಸಹಜ. ಆದರೆ ಇಲ್ಲೀಗ ಹೇಳಲು ಹೊರಟಿರುವುದು ಕನ್ನಡದ ‘ದಿಲ್ ಸೇ’ ಕುರಿತು. ಹೊಸಬರ ಈ ಸಿನಿಮಾಗೆ ಇತ್ತೀಚೆಗಷ್ಟೇ ಪವರ್​ಫುಲ್ ಮುಹೂರ್ತ ನೆರವೇರಿದೆ. ಅಂದರೆ ಈ ಚಿತ್ರಕ್ಕೆ ನಟ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.

ಹಾವೇರಿಯ ಉದ್ಯಮಿ ಶಿವಶರಣ ಗೌಡ್ರು ಅವರ ಚೊಚ್ಚಲ ನಿರ್ವಣದ ಈ ಸಿನಿಮಾಗೆ ಎಚ್. ರಾಕ್ ಮಾದೇಶ ಆಕ್ಷನ್-ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿದ್ದಾರೆ. ಜತೆಗೆ ಕಥೆ-ಚಿತ್ರಕಥೆಯನ್ನೂ ನಿರ್ದೇಶಕರೇ ಬರೆದಿದ್ದಾರೆ. ‘ಹಿಂದಿಯ ‘ದಿಲ್ ಸೇ’ಗೂ ಈ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ಎರಡು ದೇಹಗಳು ಸೇರಿದಾಗ ಪ್ರೀತಿ ಎನಿಸುವುದಿಲ್ಲ. ಅದೇ ಹೃದಯಗಳು ಜೊತೆಯಾದಾಗ ಮಾತ್ರ ನಿಜವಾದ ಪ್ರೀತಿ ಎನಿಸಿಕೊಳ್ಳುತ್ತದೆ. ಹೀಗಾಗಿ ‘ದಿಲ್ ಸೇ’ ಎಂಬ ಟೈಟಲ್ ಇಡಲಾಗಿದೆ. ಚಿತ್ರದಲ್ಲಿ ಅರ್ಥಪೂರ್ಣ ಸಂದೇಶ ಇರಲಿದೆ’ ಎಂಬ ಮಾಹಿತಿ ನೀಡಿದ್ದಾರೆ ರಾಕ್ ಮಾದೇಶ. ‘ಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತ ಕಾಲೇಜ್​ನಲ್ಲಿ ವ್ಯಾಸಂಗ ಮಾಡುವ ನಾಯಕನ ಪಾತ್ರವನ್ನು ಧರ್ಮ ಕೀರ್ತಿರಾಜ್ ಮಾಡುತ್ತಿದ್ದು, ನಾಯಕಿಯಾಗಿ ಚೆನ್ನೈ ಮೂಲದ ಶ್ರೀಪಲ್ಲವಿ ನಟಿಸಲಿದ್ದಾರೆ. ಜತೆಗೆ ಮತ್ತೊಬ್ಬ ಹೀರೋಯಿನ್ ಕೂಡ ಇರಲಿದ್ದು, ಅವರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಬೆಂಗಳೂರು, ಮಂಗಳೂರು, ಕಾಸರಗೋಡು, ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ’ ಎಂಬ ವಿವರಣೆ ನೀಡಿದ್ದಾರೆ ನಿರ್ದೇಶಕರು.

ಖಳನಾಯಕನಾಗಿ ಅನಿಲ್ ಸಿದ್ದು ಅಭಿನಯಿಸಲಿದ್ದು, ಅಶೋಕ್, ಅಮಿತ್, ಮಡೇನೂರ್ ಮನು, ನಂದಿನಿ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಲಿದ್ದಾರೆ. ನಾಲ್ಕು ಗೀತೆಗಳಿದ್ದು ವಿ. ಮನೋಹರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಕಿರಣ್ ಕುಮಾರ್ ದಿಕೊಂಡ ಛಾಯಾಗ್ರಹಣ, ಕೆ.ಆರ್. ಲಿಂಗರಾಜು ಸಂಕಲನ, ಕೆ. ಹರೀಶ್ ರಾಮ್ ಸಂಭಾಷಣೆ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net