

ಮಂಜು ಕೊಟಗುಣಸಿ ಬೆಂಗಳೂರು
‘ದಿಲ್ ಬೇಚಾರಾ’ ಸಿನಿಮಾ ನೋಡಿದ ಮೇಲೆ ನಿಜಕ್ಕೂ ಅನಿಸುವುದೇನೆಂದರೆ, ಸುಶಾಂತ್ ಇನ್ನೂ ಬದುಕಿರಬೇಕಿತ್ತು ಎಂದು. ಆದರೆ, ಅವರಿಲ್ಲ ಎನ್ನುವ ಕಾರಣಕ್ಕೇ ಈ ಸಿನಿಮಾಕ್ಕೆ ಈ ಮಟ್ಟದ ಹೈಪ್ ಸಿಕ್ಕಿದೆ. ಅಬ್ಬರಗಳಿಂದ ತುಂಬ ದೂರ ನಿಲ್ಲುವ ನೀಟಾದ ಚಿತ್ರ ‘ದಿಲ್ ಬೇಚಾರಾ’. ಜೀವನಸ್ಪೂರ್ತಿ ಮತ್ತು ಭಾವನೆಗಳ ಬುನಾದಿ ಮೇಲೆ ಪ್ರೇಮಮಹಲನ್ನು ಕಟ್ಟಿ, ವಾಸ್ತುಪ್ರಕಾರ ಅಲ್ಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿ, ಪ್ರೇಕ್ಷಕನ ದರ್ಶನಕ್ಕಿಟ್ಟ ಚಿತ್ರ. ಪ್ರಸ್ತುತ ಸನ್ನಿವೇಶಕ್ಕೆ ಹೋಲುವ ಒಂದಷ್ಟು ಘಟನೆಗಳು ‘ದಿಲ್ ಬೇಚಾರಾ’ ಚಿತ್ರದಲ್ಲಿ ಕಾಣಿಸುವುದು ನಿಜಕ್ಕೂ ಕಾಕತಾಳೀಯ!
ನನಗೆ ಕ್ಯಾನ್ಸರ್ ಇದೆ. ನಾನು ಇಂದಲ್ಲ ನಾಳೆ ಸಾಯುತ್ತೇನೆ ಎಂದು ಗೊತ್ತಿದ್ದರೂ, ಇದ್ದಷ್ಟು ದಿನವನ್ನು ಹ್ಯಾಪಿಯಾಗಿ ಕಳೆಯಬೇಕು, ಸದಾ ಎಲ್ಲರನ್ನೂ ನಗಿಸುತ್ತಲಿರಬೇಕು ಈ ರೀತಿಯ ಗುಣದವನು ಇಮ್ಯಾನ್ಯುವಲ್ ಅಲಿಯಾಸ್ ಮ್ಯಾನಿ (ಸುಶಾಂತ್). ರಾಂಚಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇತನ ಕಣ್ಣಿಗೆ ಬೀಳುವ ಕಿಜಿ ಬಸು (ಸಂಜನಾ ಸಾಂಘಿ) ಸಂಗೀತ ಪ್ರೇಮಿ. ಹಲವು ವೈರುಧ್ಯ ಗುಣಗಳಿರುವ ಈ ಜೋಡಿ, ದಿನಗಳೆದಂತೆ ಹತ್ತಿರವಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿರುವ ಕಿಜಿಗೆ ತನ್ನ ನೋವನ್ನು ಮುಚ್ಚಿಟ್ಟು ಜೀವನಸ್ಪೂರ್ತಿ ತುಂಬುತ್ತಾನೆ ಮ್ಯಾನಿ. ದಿನಗಳೆದಂತೆ ಅವರಿಬ್ಬರ ಗಾಢ ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ. ಸಾವೂ ಅಷ್ಟೇ ಹತ್ತಿರದಲ್ಲಿಯೇ ಕಾಣಿಸುತ್ತದೆ!
‘ಒಂದು ವೇಳೆ ನಾನು ಸತ್ತು ಹೋದರೆ ನೀವು ನನ್ನ ಬಗ್ಗೆ ಏನು ಮಾತನಾಡುತ್ತೀರಿ? ನಾನು ಈಗಲೇ ಕೇಳಿಸಿಕೊಳ್ಳಬೇಕು. ದಯಮಾಡಿ ಆ ಮಾತುಗಳನ್ನೇ ಈಗಲೇ ನನ್ನೆದುರು ಹೇಳಿಬಿಡಿ’.. ಎಂದು ಸ್ನೇಹಿತರಲ್ಲಿ ಕೇಳಿಕೊಳ್ಳುತ್ತಾನೆ ಮ್ಯಾನಿ. ಅವನ ಸಾವಿನ ನೋವನ್ನು ಸ್ನೇಹಿತರು ಓದುತ್ತಿದ್ದಂತೆ, ನೋಡುಗ ಅಕ್ಷರಶಃ ಭಾವುಕನಾಗುತ್ತಾನೆ. ಅಲ್ಲಿ ಸುಶಾಂತ್ ಸಾವೇ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
ಭಾವುಕತೆಗೆ ಹೆಚ್ಚಿನ ಸ್ಪೇಸ್ ನೀಡಿರುವ ನಿರ್ದೇಶಕ ಮುಖೇಶ್ ಛಾಬ್ರಾ, ಮೂಲ ಹಾಲಿವುಡ್ನ ‘ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್’ ಚಿತ್ರವನ್ನು ಇಲ್ಲಿನ ನೆಟಿವಿಟಿಗೆ ಭಟ್ಟಿ ಇಳಿಸಿದ್ದಾರೆ. ಮನಕ್ಕೆ ತಟ್ಟುವ ಸಂಭಾಷಣೆಗಳು ಚಿತ್ರದ ಹೈಲೈಟ್. ಸುಶಾಂತ್ ಮೌನವಾಗಿಯೇ ಪಾತ್ರವನ್ನು ಜೀವಿಸಿ ನೋಡುಗನ ಕಣ್ಣು ಒದ್ದೆಮಾಡುತ್ತಾರೆ.
ಒಂದು ವೇಳೆ ಸುಶಾಂತ್ ಬದುಕಿದ್ದಿದ್ದರೆ, 10ರಲ್ಲಿ 11 ಎಂಬಂತೆ ಈ ಸಿನಿಮಾ ಹೀಗೆ ಬಂದು ಹಾಗೆ ಹೋಗುತ್ತಿತ್ತೇನೋ. ಅವರಿಲ್ಲ ಅನ್ನೋ ಒಂದೇ ಕಾರಣಕ್ಕೆ ಅನುಕಂಪದ ಹಳಿ ಮೇಲೆ ‘ದಿಲ್ ಬೇಚಾರಾ’ ನೋಡಿಸಿಕೊಂಡು ಹೋಗುತ್ತಿದೆ. ಒಂದು ವೇಳೆ ಈ ಹಿಂದಿನ ಅವರ ಸಿನಿಮಾಗಳಿಗೆ ಈಗ ಕೊಟ್ಟಷ್ಟೇ ಪ್ರತಿಕ್ರಿಯೆ ಸಿಕ್ಕಿದ್ದರೆ ಬಹುಶಃ ಸುಶಾಂತ್ ಇಂದಿಗೂ ಜೀವಂತವಾಗಿರುತ್ತಿದ್ದರೇನೋ!!