

ಬೆಂಗಳೂರು: ಅತಿಮಾನುಷ ಶಕ್ತಿಯೊಂದರ ಹಿನ್ನೆಲೆಯಲ್ಲಿ ಸಾಗುವ ಮರ್ಡರ್ ಮಿಸ್ಟರಿ ಕಥೆಯನ್ನು ಆಧರಿಸಿ ಕಮರ್ ಫಿಲಂ ಫ್ಯಾಕ್ಟರಿ ಮತ್ತು ಕೆ.ಕೆ. ಕಂಬೈನ್ಸ್ ಸಂಸ್ಥೆ ಸಿನಿಮಾವೊಂದನ್ನು ನಿರ್ವಿುಸುತ್ತಿದೆ. ಹಾಗಂತ ಇದು ನೈಜ ಘಟನೆ ಆಧರಿತ ಚಿತ್ರವಲ್ಲ. ಬದಲಿಗೆ ಕಾಲ್ಪನಿಕ ಕಥೆಯನ್ನೇ ಆಯ್ಕೆ ಮಾಡಿಕೊಂಡು ನಿರ್ದೇಶನ ಮಾಡುತ್ತಿದ್ದಾರೆ ಕನ್ನಡ ಬಾರದ ಮುಂಬೈ ಮೂಲದ ಆನಂದ್ ಪ್ರಕಾಶ್ ಮಿಶ್ರ. ಈ ಚಿತ್ರಕ್ಕೆ ದಿಗಂತ್ ನಾಯಕನಾದರೆ, ಕಾವ್ಯಾ ಶೆಟ್ಟಿ ಮತ್ತು ಕೊಮಿಕಾ ಅಂಚಲ್ ನಾಯಕಿಯರಾಗಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ಸಹ ನೆರವೇರಿದೆ.
ಈ ಪ್ಯಾರಾ ನಾರ್ಮಲ್ ಕಥಾಹಂದರದ ಸಿನಿಮಾದಲ್ಲಿ ಬರಹಗಾರನಾಗಿ ದಿಗಂತ್ ಕಾಣಿಸಿಕೊಳ್ಳಲಿದ್ದಾರೆ. ‘ಬರವಣಿಗೆಗಾಗಿ ಜಾಗವೊಂದಕ್ಕೆ ಹೋದಾಗ ಅಲ್ಲಿ ಘಟಿಸುವ ಕೆಲವು ಚಿತ್ರವಿಚಿತ್ರ ಘಟನೆಗಳೇ ಈ ಸಿನಿಮಾದ ಹೈಲೈಟ್. ಕೊಡಗು, ಬೆಂಗಳೂರು ಮತ್ತು ಲಡಾಕ್ನಲ್ಲಿಯೂ ಚಿತ್ರದ ಶೂಟಿಂಗ್ ನಡೆಯಲಿದೆ’ ಎನ್ನುತ್ತಾರೆ.
ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ‘ಖುಷಿ’ ಖ್ಯಾತಿಯ ತರುಣ್, ಈ ಸಿನಿಮಾ ಮೂಲಕ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ. ಅವರಿಗಿಲ್ಲಿ ನೆಗೆಟಿವ್ ಶೇಡ್ನ ಪಾತ್ರ ನೀಡಿದ್ದಾರೆ ನಿರ್ದೇಶಕರು. ಪಾತ್ರದ ಬಗ್ಗೆ ಗುಟ್ಟು ಬಿಟ್ಟುಕೊಡದ ಕಾವ್ಯಾ, ‘ಒಂದೊಳ್ಳೆ ಸಿನಿಮಾದ ಭಾಗವಾಗುತ್ತಿದ್ದೇನೆ. ಇದುವರೆಗೂ ನಟಿಸಿದ ಸಿನಿಮಾಗಳಿಗಿಂತ ಹೊಸ ತರಹದ ಪಾತ್ರ ಸಿಕ್ಕಿದೆ’ ಎಂದರು ಕಾವ್ಯಾ. ಕೊಮಿಕಾ ಅಂಚಲ್, ‘ತರಂಗ’ ವಿಶ್ವ ಸೇರಿ ಹಲವರು ಈ ಸಿನಿಮಾದಲ್ಲಿದ್ದಾರೆ. ಪಿಕೆಎಚ್ ದಾಸ್ ಛಾಯಾಗ್ರಹಣ, ಆನಂದ ರಾಜ್ ವಿಕ್ರಂ ಸಂಗೀತ, ಸಂಜೀವ್ ರೆಡ್ಡಿ ಸಂಕಲನವಿದೆ.