

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ದಿಗಂತ್ ಮಂಚಾಲೆ, ಧನ್ಯಾ ರಾಮಕುಮಾರ್, ಶರ್ಮಿಳಾ ಮಾಂಡ್ರೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಜನಾರ್ಧನ್ ಚಿಕ್ಕಣ್ಣ ಆ್ಯಕ್ಷನ್-ಕಟ್ ಹೇಳಿರುವ ಚಿತ್ರ ‘ಪೌಡರ್‘. ಇತ್ತೀಚೆಗಷ್ಟೆ ಚಿತ್ರದ ಮೊದಲ ಸಾಂಗ್ ‘ಮಿಷನ್ ಘಮ ಘಮ‘ ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ವೈರಲ್ ಆಗಿದೆ. ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮತ್ತು ರ್ಯಾಪರ್ ಎಂ.ಸಿ.ಬಿಜ್ಜು ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಮೊದಲ ಗೀತೆಯಿದು. ಮಾಧುರ್ಯ ಪ್ರಧಾನ ಗೀತೆಗಳಿಗೆ ಹೆಸರುವಾಸಿಯಾದ ವಾಸುಕಿ ವೈಭವ್ ಮತ್ತು Rap ಸಂಗೀತದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಎಂ.ಸಿ.ಬಿಜ್ಜು ಒಟ್ಟಾಗಿ ಬಂದಿರುವುದು ಹಾಡಿಗೆ ಹೆಚ್ಚು ಮೆರಗನ್ನು ತಂದಿದೆ.
ಇಬ್ಬರು ಯುವಕರು ಒಂದು ನಿಗೂಢವಾದ "ಪೌಡರ್" ಪ್ರಭಾವದಿಂದಾಗಿ ಧಿಡೀರನೇ ಶ್ರೀಮಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳ ಸುತ್ತ ಸುತ್ತವ ಕಥೆ "ಪೌಡರ್". ಇದೇ ಆಗಸ್ಟ್ 15ರಂದು ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ.
ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ ಮುಖ್ಯ ಭೂಮಿಕೆಯಲ್ಲಿರುವ "ಪೌಡರ್"ಗೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿರಲಿದೆ. ಕನ್ನಡದ ಕೆಆರ್ಜಿ ಸ್ಟೂಡಿಯೋಸ್ ಮತ್ತು ಬಾಲಿವುಡ್ನ ಟಿವಿಎಫ್ ಮೋಷನ್ ಪಿಕ್ಚರ್ಸ್ ಮೊದಲ ಬಾರಿಗೆ ಜಂಟಿಯಾಗಿ ‘ಪೌಡರ್‘ ಸಿನಿಮಾ ನಿರ್ಮಿಸುತ್ತಿದ್ದಾರೆ.