ನಿಟ್ಟೂರಲ್ಲಿ ದಿಗಂತ್ ರಂಜನಿ ಪ್ರೇಮ್​ ಕಹಾನಿ

Ranjini
Published on

ಬೆಂಗಳೂರು: ಕಿರುತೆರೆಯಿಂದ ಆಗಮಿಸಿ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಒಂದೊಂದಾಗಿ ಬುಟ್ಟಿಗೆ ಹಾಕಿಕೊಳ್ಳುತ್ತಿರುವ ನಟಿ ರಂಜನಿ ರಾಘವನ್, ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಪಕ್ಕಾ ಹಳ್ಳಿಗಾಡಿನ ಹಿನ್ನೆಲೆಯ, ನೈಜತೆಗೆ ಹತ್ತಿರವಿರುವ ಕಥೆಯನ್ನು ಆಯ್ದುಕೊಂಡ ಸಂತಸದಲ್ಲಿದ್ದಾರೆ. ಇನ್ನೊಂದು ವಿಶೇಷ ಏನೆಂದರೆ, ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರದಲ್ಲಿ ದಿಗಂತ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಅವರದ್ದಿಲ್ಲಿ ಗೊಬ್ಬರ ಅಂಗಡಿ ಮಾಲೀಕನ ಪಾತ್ರ. ಅಡಿಕೆ ಬೆಳೆಗಾರನಾಗಿಯೂ ಅವರ ಪಾತ್ರ ಸಾಗಲಿದೆ.

ಈ ಹಿಂದೆ ಹಲವು ಕಿರುಚಿತ್ರಗಳಿಗೆ ನಿರ್ದೇಶನ ಮಾಡಿದ ಅನುಭವ ಇರುವ ನಿರ್ದೇಶಕ ವಿನಾಯಕ ಕೋಡ್ಸರ, ಚೊಚ್ಚಲ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುವ ತಯಾರಿಯಲ್ಲಿದ್ದಾರೆ. ಕಥೆ, ಚಿತ್ರಕಥೆ ಅವರೇ ಬರೆದಿದ್ದು, ಸಿಗಂದೂರು ಬಳಿಕ ನಿಟ್ಟೂರಿನಲ್ಲಿ ನಡೆಯುವ ಕಥೆ ಇದಾಗಿದೆ. ಮಲೆನಾಡಿನ ಸಂಸ್ಕೃತಿ, ಹಳ್ಳಿ ಸೊಗಡು ಈ ಚಿತ್ರದ ಹೈಲೈಟ್​ಗಳಲ್ಲಿ ಒಂದಾಗಿರಲಿದ್ದು, ನಾಯಕ ದಿಗಂತ್​ಗೆ ರಂಜನಿ ಜೋಡಿಯಾಗಿರಲಿದ್ದಾರೆ. ‘ಕನ್ನಡದಲ್ಲಿ ಇದು ನನ್ನ ನಾಲ್ಕನೇ ಸಿನಿಮಾ. ಇಲ್ಲಿಯವರೆಗೂ ರಿಯಲಿಸ್ಟಿಕ್ ರೀತಿಯ ಸಿನಿಮಾದಲ್ಲಿ ನಾನು ನಟಿಸಿಲ್ಲ. ಮೊದಲ ಬಾರಿಗೆ ಅಂಥದ್ದೊಂದು ಅವಕಾಶ ಸಿಕ್ಕಿದೆ. ಚಿತ್ರದಲ್ಲಿ ನಾನು ಮತ್ತು ದಿಗಂತ್ ಬಾಲ್ಯದ ಸ್ನೇಹಿತರು. ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದೇವೆ. ಗುರುವಾರ ಸಿಗಂದೂರಿನಲ್ಲೇ ಮುಹೂರ್ತ ನೆರವೇರಿದೆ.

ಮಾರ್ಚ್ 14ರಿಂದ ಶೂಟಿಂಗ್ ಶುರುವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ ನಟಿ ರಂಜನಿ. ಅಂದಹಾಗೆ, ರಿಯಲ್​ಸ್ಟಾರ್ ಉಪೇಂದ್ರ ಅವರ ‘ಎ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಸಿಲ್ಕ್ ಮಂಜು, ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ. ಸೋಶಿಯಲ್ ಡ್ರಾಮಾ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದ್ದು, ವಿಶ್ವಜಿತ್ ರಾವ್ ಸಾಹಿತ್ಯ, ನಂದಕಿಶೋರ್ ಛಾಯಾಗ್ರಹಣ, ಪ್ರಜ್ವಲ್ ಪೈ ಸಂಗೀತ ಸಂಯೋಜಿಸಲಿದ್ದಾರೆ.

ಗೊಬ್ಬರದ ಅಂಗಡಿ ಓನರ್ ಆದ್ರು ದೂದ್​ಪೇಡಾ: ಮದುವೆ ಬಳಿಕ ದಿಗ್ಗಿ-ಆಂಡಿ ಒಂದಾದ್ರು!

ಶೀರ್ಷಿಕೆ ಅಂತಿಮವಾಗದ ಈ ಸಿನಿಮಾದಲ್ಲಿ ಇನ್ನೊಂದು ವಿಶೇಷವಿದೆ. ದಿಗಂತ್ ಮತ್ತು ಐಂದ್ರಿತಾ ರೈ ಮದುವೆ ಬಳಿಕ ಒಂದು ಚಿತ್ರದಲ್ಲೂ ಜೋಡಿಯಾಗಿ ಕಾಣಿಸಿಕೊಂಡಿಲ್ಲ. ಅದು ಈ ಸಿನಿಮಾದ ಮೂಲಕ ಈಡೇರಿದ್ದು, ವಕೀಲೆಯಾಗಿ ಐಂದ್ರಿತಾ ವಾದ ಮಾಡಲಿದ್ದಾರೆ. ಹಾಸ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಈ ಸಿನಿಮಾ ತಯಾರಾಗಲಿದೆಯಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net