ಮರಾಠಿಗೆ ದಿಯಾ, ಅಲ್ಲೂ ಪೃಥ್ವಿ ಅಭಿನಯ..

Prathwi
Published on

ಬೆಂಗಳೂರು: ಪೃಥ್ವಿ ಅಂಬರ್ ನಟನೆಯ ‘ದಿಯಾ’ ಚಿತ್ರವು ಹಿಂದಿಗೆ ರಿಮೇಕ್ ಆಗಿ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಆದರೆ, ಚಿತ್ರ ಬಂದಿದ್ದು ಹೋಗಿದ್ದು ಗೊತ್ತಾಗಲೇ ಇಲ್ಲ. ಕನ್ನಡದಲ್ಲಿ ಮಾಡಿದ ಪಾತ್ರವನ್ನೇ ಹಿಂದಿಯಲ್ಲೂ ಮುಂದುವರೆಸಿದ್ದರು ಪೃಥ್ವಿ. ಚಿತ್ರವು ತಮಗೊಂದು ಬ್ರೇಕ್ ಕೊಡಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಅದು ಸುಳ್ಳಾಯಿತು. ಈಗ ಅದೇ ‘ದಿಯಾ’, ಮರಾಠಿಗೆ ರಿಮೇಕ್ ಆಗುತ್ತಿದೆ. ಪೃಥ್ವಿ ಇಲ್ಲೂ ತಮ್ಮ ಪಾತ್ರವನ್ನು ಮುಂದುವರೆಸಿದ್ದು, ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಅಶೋಕ್, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಮೃಣಾಲ್ ಕುಲಕರ್ಣಿ, ಅಜಿಂಕ್ಯಾ ರೌತ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರಿನಲ್ಲೇ ಈ ಚಿತ್ರದ ಬಹುತೇಕ ಚಿತ್ರೀಕರಣ ಆಗಿದೆಯಂತೆ. ಈಗಾಗಲೇ ಶೇ. 95ರಷ್ಟು ಮುಗಿದಿದ್ದು, ಸದ್ಯದಲ್ಲೇ ಚಿತ್ರೀಕರಣ ಸಂಪೂರ್ಣವಾಗಲಿದೆ. ಶಿವರಾಜಕುಮಾರ್ ಅಭಿನಯದ ‘ಬೈರಾಗಿ’ ಚಿತ್ರದಲ್ಲಿ ಪೃಥ್ವಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರ ಮೊನ್ನೆಯಷ್ಟೇ (ಜುಲೈ 01) ಬಿಡುಗಡೆಯಾಗಿದೆ. ಈ ಶುಕ್ರವಾರ (ಜುಲೈ 08) ಪೃಥ್ವಿ ಅಭಿನಯದ ಇನ್ನೊಂದು ಚಿತ್ರ ತೆರೆಗೆ ಬರಲಿದೆ. ಅದೇ ‘ಶುಗರ್​ಲೆಸ್’.

ಈ ಚಿತ್ರದಲ್ಲಿ ಚಿಕ್ಕ ವಯಸ್ಸಿನಲ್ಲೇ ಡಯಾಬಿಟಿಸ್​ಗೆ ತುತ್ತಾಗಿರುವ ಯುವಕನಾಗಿ ಅವರು ಕಾಣಿಸಿಕೊಂಡಿದ್ದಾರೆ. ‘ಡಯಾಬಿಟಿಸ್ ಕುರಿತು ಇದುವರೆಗೂ ಯಾರೂ ಚಿತ್ರ ಮಾಡಿರಲಿಲ್ಲ ಎನ್ನುವ ಪೃಥ್ವಿ, ಇದೊಂದು ಫೀಲ್ ಗುಡ್ ಚಿತ್ರ’ ಎನ್ನುತ್ತಾರೆ. ಇದಲ್ಲದೆ, ‘ಲೈಫ್ ಈಸ್ ಬ್ಯೂಟಿಫುಲ್’, ‘ದೂರದರ್ಶನ’, ‘ಫಾರ್ ರಿಜಿಸ್ಟ್ರೇಶನ್’, ‘ಅಬ ಜಬ ದಬ’ ಮತ್ತು ಇನ್ನೊಂದು ಹೆಸರಿಡದ ಕನ್ನಡ ಚಿತ್ರದಲ್ಲೂ ಅವರು ನಟಿಸಿ, ಈ ಚಿತ್ರಗಳ ಬಿಡುಗಡೆಗೆ ಕಾದಿದ್ದಾರೆ. ‘ಬೈರಾಗಿ’ ನಿರ್ದೇಶಿಸಿರುವ ವಿಜಯ್ ಮಿಲ್ಟನ್ ನಿರ್ದೇಶನದ ‘ಮಲೈ ಪಿಡಿಕ್ಕಾದ ಮನಿದನ್’ ಎಂಬ ತಮಿಳು ಚಿತ್ರದಲ್ಲೂ ಅವರು ಧನಂಜಯ್ ಜತೆಗೆ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸೆಪ್ಟೆಂಬರ್​ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಪೃಥ್ವಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net