

ಬೆಂಗಳೂರು: ‘6-5=2’ ಸಿನಿಮಾ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ನಿರ್ದೇಶಕ ಅಶೋಕ್, ಇದೀಗ ‘ದಿಯಾ’ ಮೂಲಕ ಮರಳಿದ್ದಾರೆ. ರೊಮ್ಯಾಂಟಿಕ್ ಕಥೆ ಒಳಗೊಂಡ ಈ ಚಿತ್ರ, ಈಗಾಗಲೇ ಟ್ರೇಲರ್ ಮೂಲಕ ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ. ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ಬಂದಿತ್ತು ಚಿತ್ರತಂಡ.
‘6-5=2’ ಸಿನಿಮಾಗಿಂತ ಮೊದಲೇ ಈ ಚಿತ್ರದ ಕಥೆ ಸಿದ್ಧವಿತ್ತು. ಬಜೆಟ್ ಸಮಸ್ಯೆಯಿಂದ ಮಾಡಲಾಗಿರಲಿಲ್ಲ’ ಎಂದು ಮಾತು ಶುರುಮಾಡಿದ ಅಶೋಕ್, ‘ವಿಭಿನ್ನ ಪ್ರೇಮಕಥೆ ಹೊಂದಿರುವ ಚಿತ್ರ ಇದು. ಇಲ್ಲಿ ಹಾಡುಗಳಿಲ್ಲ, ಹಿನ್ನೆಲೆ ಸಂಗೀತ ಇದೆ. ಸಾಮಾನ್ಯ ಪ್ರೇಕ್ಷಕನಿಗೂ ಇಷ್ಟವಾಗುವ ರೀತಿ ಸಿನಿಮಾ ಮಾಡಲಾಗಿದೆ’ ಎಂದರು.
ನಟ ಪೃಥ್ವಿ ಅಂಬರ್ ಕಿರುತೆರೆಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿದವರು. ಕನ್ನಡ ಚಿತ್ರಗಳಲ್ಲಿ ನಟಿಸಿರುವ ಇವರು ‘ದಿಯಾ’ ಮೂಲಕ ನಾಯಕನಾಗಿದ್ದಾರೆ. ‘ನಾನು ಈಗ ಏನಾಗಿದ್ದೇನೋ ಅದಕ್ಕೆ ನಿರ್ದೇಶಕರೇ ಕಾರಣ. ಚಿತ್ರದಲ್ಲಿ ಹೊಸ ಥರ ನನ್ನನ್ನು ತೋರಿಸಿದ್ದಾರೆ. ಪ್ರೀತಿ-ಪ್ರೇಮದ ಚಿತ್ರಗಳು ಈ ಹಿಂದೆ ಸಾಕಷ್ಟು ಬಂದಿವೆ. ಆದರೆ ‘ದಿಯಾ’ ಅವುಗಳಿಗಿಂತ ವಿಭಿನ್ನ’ ಎಂದರು ಪೃಥ್ವಿ.
‘ಚಿತ್ರದಲ್ಲಿ ಪ್ರಾಮುಖ್ಯತೆ ಇರುವ ಇಂತಹ ಪಾತ್ರಗಳು ಸ್ಟಾರ್ ನಟಿಯರ ಪಾಲಾಗುವುದು ಸಾಮಾನ್ಯ. ಆದರೆ ಈ ಅವಕಾಶ ನನಗೆ ನೀಡಿದ ನಿರ್ದೇಶಕ ಮತ್ತು ನಿರ್ವಪಕರಿಗೆ ಧನ್ಯವಾದ. ಪ್ರೇಮ ವೈಫಲ್ಯಗೊಂಡ ಹುಡುಗಿಯ ಮನಸ್ಥಿತಿ ಯಾವ ರೀತಿ ಇರುತ್ತದೆ ಎಂದು ತೋರಿಸುವ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಪಾತ್ರ ಚೆನ್ನಾಗಿ ಮೂಡಿಬಂದಿದೆ’ ಎಂದು ಖುಷಿ ವ್ಯಕ್ತಪಡಿಸಿದರು ‘ಸೋಡಾಬುಡ್ಡಿ’ ಸಿನಿಮಾ ಖ್ಯಾತಿಯ ನಟಿ ಖುಷಿ.
ಹೊಸಬರ ಸಿನಿಮಾಗಳನ್ನು ಪ್ರೇಕ್ಷಕರು ಮೊದಲ ದಿನ ಬಂದು ನೋಡುವುದು ಕಡಿಮೆ. ಮೊದಲ ಪ್ರದರ್ಶನಕ್ಕೆ ಹೆಚ್ಚು ಜನ ಬಂದರೆ ಸಿನಿಮಾ ಬಗ್ಗೆ ಬೇರೆಯವರಿಗೆ ಗೊತ್ತಾಗಲು ಸಾಧ್ಯ’ ಎನ್ನುವ ನಿರ್ವಪಕ ಕೃಷ್ಣ ಚೈತನ್ಯ, ನಮ್ಮ ಸಿನಿಮಾ ಮೊದಲ ಶೋ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೋಡಬೇಕು ಎಂಬ ಆಸೆ ವ್ಯಕ್ತಪಡಿಸಿದರು.
‘ಚಿತ್ರದಲ್ಲಿ ನನ್ನದು ಕೂಡ ಪ್ರಮುಖ ಪಾತ್ರ ಎಂದರು’ ಕಿರುತೆರೆ ಖ್ಯಾತಿಯ ನಟ ದೀಕ್ಷಿತ್. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ವಿಶಾಲ್ ಛಾಯಾಗ್ರಹಣ, ನವೀನ್ ರಾಜ್ ಸಂಕಲನ ಇದೆ. ಈ ಸಿನಿಮಾ ಫೆ. 7ರಂದು ಬಿಡುಗಡೆ ಆಗಲಿದೆ.