

ಬೆಂಗಳೂರು: ಇತ್ತೀಚೆಗಷ್ಟೇ ಡಾ. ರಾಜಕುಮಾರ್ ಅವರ ಸೋದರಿ ನಾಗಮ್ಮನವರ ಮೊಮ್ಮಗ ಲಕ್ಷ್ಮಣ್ ಗೋಪಾಲ್,
'ದುನಿಯಾ' ವಿಜಯ್ ನಿರ್ದೇಶನದ ಚಿತ್ರವೊಂದಕ್ಕೆ ಹೀರೋ ಆಗಿ ಆಯ್ಕೆಯಾಗಿದ್ದು ಗೊತ್ತಿರಬಹುದು. ಈಗ ಡಾ. ರಾಜಕುಮಾರ್ ಕುಟುಂಬದ ಧ್ರುವನ್ ಸಹ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಸಾಯಿಪಲ್ಲವಿ ಬದಲು ರಶ್ಮಿಕಾ
ಈ ಧ್ರುವನ್ ಯಾರು ಎಂಬ ಪ್ರಶ್ನೆ ಬರಬಹುದು. ಪಾರ್ವತಮ್ಮ ರಾಜಕುಮಾರ್ ಅವರ ಕಿರಿಯ ಸಹೋದರ ಶ್ರೀನಿವಾಸ ರಾಜು ಅವರ ಪುತ್ರ ಈ ಧ್ರುವನ್. ಶ್ರೀನಿವಾಸ್ ಅವರು ಹಲವು ಚಿತ್ರಗಳ ನಿರ್ಮಾಣ ಮಾಡುವುದರ ಜತೆಗೆ, ವಜ್ರೇಶ್ವರಿ ಸಂಸ್ಥೆಯ ಹಲವು ಚಿತ್ರಗಳ ನಿರ್ಮಾಣದಲ್ಲೂ ತೊಡಗಿಸಿಕೊಂಡವರು. ಈಗ ಅವರ ಮಗ ಧ್ರುವನ್ 'ಭಗವಾನ್ ಶ್ರೀ ಕೃಷ್ಣಪರಮಾತ್ಮ' ಎಂಬ ಹೊಸ ಚಿತ್ರದ ಮೂಲಕ ಹೀರೋ ಆಗುವುದಕ್ಕೆ ಹೊರಟಿದ್ದಾರೆ.
ಇತ್ತೀಚೆಗೆ, ರಾಜರಾಜೇಶ್ವರಿನಗರದ ಷಣ್ಮುಖ ದೇವಸ್ಥಾನದಲ್ಲಿ ನಡೆದ ಸರಳ ಪೂಜೆಯ ಮೂಲಕ ಹೊಸ ಈ ಚಿತ್ರ ಪ್ರಾರಂಭವಾಗಿದೆ. ಅಷ್ಟೇ ಅಲ್ಲ, 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಕೋರಿದ್ಧಾರೆ. ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ದರ್ಶನ್ ಅವರ ಸಮ್ಮುಖದಲ್ಲಿ ಶೀರ್ಷಿಕೆ ಅನಾವರಣಗೊಂಡಿತ್ತು. ಈಗ ಮುಹೂರ್ತಕ್ಕೂ ದರ್ಶನ್ ಅವರೇ ಬಂದು ತಂಡವನನ್ನು ಬೆಂಬಲಿಸಿದ್ದಾರೆ ಎನ್ನುವುದು ವಿಶೇಷ.
'ಭಗವಾನ್ ಶ್ರೀ ಕೃಷ್ಣಪರಮಾತ್ಮ’ ಚಿತ್ರವನ್ನು ಪ್ರಸಾದ್ ಬಿ.ಎನ್. ನಿರ್ದೇಶಿಸುತ್ತಿದ್ದಾರೆ. ಧ್ರುವನ್ ಮತ್ತು ನಿರ್ದೇಶಕ ಪ್ರಸಾದ್ ಬಹುಕಾಲದ ಗೆಳೆಯರು. ಎಲ್ಲರೂ ಇಷ್ಟಪಡುವಂಥಾ ಸಿನಿಮಾವೊಂದನ್ನು ಮಾಡಬೇಕು ಅಂತಾ ಯೋಚಿಸುವ ಹೊತ್ತಿಗೇ ಅದ್ಭುತವಾದ ಕಥೆಯ ಎಳೆ ಸಿಕ್ಕಿತಂತೆ. ಹಾಗೆ ಶುರುವಾಗಿದ್ದೇ ಈ ಚಿತ್ರ.
ಭರತ್ ವಿಷ್ಣುಕಾಂತ್ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಧ್ರುವನ್ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ದತ್ತಣ್ಣ ಅವರಿಗೆ ಈ ಚಿತ್ರದಲ್ಲಿ ಪ್ರಮುಖವಾದ ಪಾತ್ರವೊಂದಿದೆ. ಚಿಕ್ಕಮಗಳೂರು, ಬೆಂಗಳೂರು, ಚೆನ್ನೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ನವೆಂಬರ್ ಕೊನೆಯ ಹೊತ್ತಿಗೆ ಶೂಟಿಂಗ್ ಆರಂಭಿಸಿ, ಎರಡು ಹಂತಗಳಲ್ಲಿ ಸಿನಿಮಾವನ್ನು ಪೂರ್ಣಗೊಳಿಸುವುದು ಚಿತ್ರತಂಡದ ಸದ್ಯದ ಯೋಜನೆ.